ಬೆಳ್ತಂಗಡಿ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇತರರಿಗೂ ಮಾದರಿಯೆನಿಸುವಂತಹದು. ಅದರಲ್ಲಿ ಪ್ರಮುಖವಾದದ್ದು ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗೂ ನವೀಕರಣ. ಬೆಳ್ತಂಗಡಿ ಸಂಪರ್ಕಿಸುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳೀಗ ಶರವೇಗದ ಅಭಿವೃದ್ಧಿಯ ಪರ್ವಕಾಲದಲ್ಲಿದೆ. ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರ ಸಂಪರ್ಕಿಸುವ ಬೆಳ್ತಂಗಡಿಗೆ ಈ ಹಿಂದೆ ರಸ್ತೆ ಸಂಪರ್ಕದ್ದೇ ಬಹುದೊಡ್ಡ ಸವಾಲಾಗಿತ್ತು. ಆದರೆ ಪ್ರಸಕ್ತ ವಿದ್ಯಮಾನ ಬದಲಾಗಿದೆ. ಹಳ್ಳಿಗಾಡಿನ ರಸ್ತೆ ಜತೆಗೆ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ವೇಗ ಪಡೆಯುತ್ತಿದೆ.
ಗುರುವಾಯನಕೆರೆ-ವೇಣೂರು ಮೂಡುಬಿದ್ರೆ
ಮೂಡುಬಿದ್ರೆಯಿಂದ ಹಾಗೂ ಕಾರ್ಕಳ ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ಸುಬ್ರಹ್ಮಣ್ಯ, ಶಿರಾಡಿ, ಚಾರ್ಮಾಡಿಗೆ ಸೇರಲು ಗುರುವಾಯನಕೆರೆ ವರೆಗಿನ ರಸ್ತೆಗಳು ತೀರ ತಿರುವು ಹಾಗೂ ಕಿರಿದಾಗಿದ್ದವು. ಅನೇಕ ಅಪಘಾತಗಳಾಗುವುದನ್ನು ಮನಗಂಡ ಶಾಸಕ ಹರೀಶ್ ಪೂಂಜ ಅವರು ಪ್ರವಾಸೋದ್ಯಮಕ್ಕೆ ಹೊಂದಿಕೊಂಡಂತೆ ಅಭಿವೃದ್ಧಿಗೆ ಆದ್ಯತೆ ನೀಡಿ ಲೋಕೋಪಯೋಗಿ ಇಲಾಖೆಯಡಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯೋಜನೆಯಡಿ ಗುರುವಾಯನಕೆರೆಯಿಂದ ವೇಣೂರು ಮೂಡುಬಿದ್ರೆ ಹಾಗೂ ಕಾರ್ಕಳ ರಸ್ತೆಗೆ ೩೭ ಕೋ.ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಡಿ ವೇಣೂರು ಸಂಪರ್ಕಿಸುವ ರಸ್ತೆಗೆ ಶಕ್ತಿನಗರದಿಂದ ಗರ್ಡಾಡಿ ನಂದಿಬೆಟ್ಟದವರೆಗೆ ೧೫ ಕೋ.ರೂ. ಅನುದಾನದಲ್ಲಿ ೫ ಕಿ.ಮೀ.ರಸ್ತೆಯನ್ನು ಸಾಕಷ್ಟು ಅಗಲಿಸಿ ಸುಂದರವಾಗಿ ಅಭಿವೃದ್ಧಿಗೊಳಿಸಲಾಗಿದೆ. ಈ ಹಿಂದೆ ೫ ವರೆ ಮೀಟರ್ ಅಗಲವಿದ್ದ ರಸ್ತೆಯನ್ನು ೭ ಮೀಟರ್‌ಗೆ ವಿಸ್ತರಿಸಲಾಗಿದೆ.
ಜಿಲ್ಲೆಯ ಪ್ರಪ್ರಥಮ ಸೋಲಾರ್ ದಾರಿದೀಪ
೫ ಕಿ.ಮೀ. ಅಭಿವೃದ್ಧಿ ರಸ್ತೆಯಲ್ಲಿ ಗರ್ಡಾಡಿಯಿಂದ ನಂದಿಬೆಟ್ಟದವರೆಗೆ ೧.೬ ಕಿ.ಮೀ. ರಸ್ತೆಯು ನಾಲ್ಕು ಲೇನ್ ರಸ್ತೆಯಾಗಿ ಅಗಲೀಕರಣಗೊಳಿಸಿ ಮಧ್ಯೆ ಡಿವೈಡರ್ ರಚಿಸಲಾಗಿದೆ. ಹೆಚ್ಚಾಗಿ ಡಿವೈಡರ್‌ಗಳಿಗೆ ವಿದ್ಯುತ್ ದಾರಿದೀಪ ನಿರ್ಮಿಸಿ ಸ್ಥಳೀಯಾಡಳಿತಕ್ಕೆ ನಿರ್ವಹಣೆ ಜವಾಬ್ದಾರಿಯಿದೆ. ಆದರೆ ದ.ಕ. ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ೨ ಹೈಮಾಸ್ಟ್ ಸಹಿತ ೫೫ ಸೋಲಾರ್ ದಾರಿದೀಪವನ್ನು ಅಳವಡಿಸಿ ವಿದ್ಯುತ್ ಹೊರೆ ತಗ್ಗಿಸುವ ಕಾರ್ಯ ಮಾಡಲಾಗಿದೆ. ಇದರಿಂದ ಮಾಸಿಕವಾಗಿ ಕನಿಷ್ಠ ೮೦ ರಿಂದ ೧ಲಕ್ಷ ರೂ. ವರೆಗಿನ ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಜೆ.ಡಿ.ಸುವರ್ಣ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದು, ಆರಂಭದಲ್ಲಿ ರಸ್ತೆ ವಿನ್ಯಾಸದ ಕುರಿತು ಸಾರ್ವಜನಿಕರಿಂದ ಬಹಳಷ್ಟು ಆಕ್ಷೇಪ ಕೇಳಿಬಂದಿತ್ತು. ಕಡೆಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಬಹಳ ಪ್ರಮುಖವಾಗಿರುವ ಗುರುವಾಯನಕೆರೆ ಶಕ್ತಿನಗರ-ಪಿಲ್ಯ ರಸ್ತೆ
೨೩.೫ ಕೋ.ರೂ. ಅನುದಾನದಡಿ ಗುರುವಾಯನಕೆರೆ-ಕಾರ್ಕಳ ರಾಜ್ಯ ಹೆದ್ದಾರಿ-೩೭ನ್ನು ಗುರುವಾಯನಕೆರೆಯ ಶಕ್ತಿನಗರದಿಂದ-ಪಿಲ್ಯ ವರೆಗಿನ ೧೧ ಕಿ.ಮೀ. ರಸ್ತೆಯ ಅಭಿವೃದ್ಧಿ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. ೧೦ ಮೀಟರ್ ವಿಸ್ತಾರದ ದ್ವಿಪಥ ರಸ್ತೆಯಾಗಲಿದ್ದು ಈಗಾಗಲೆ ಸುಮಾರು 8 ಕಿ.ಮೀ. ರಸ್ತೆ ಪೂರ್ಣಗೊಂಡಿದೆ. ಪಿಲ್ಯದಲ್ಲಿ ಕಿರುಸೇತುವೆ, ಅಳದಂಗಡಿ ಪೇಟೆಯಲ್ಲಿ ೨೦೦ ಮೀಟರ್ ಉದ್ದದ ಡಿವೈಡರ್ ಸಹಿತ ೪ ಲೇನ್ ರಸ್ತೆ ನಿರ್ಮಾಣಗೊಳ್ಳಲಿದೆ. ಪಿಲ್ಯದಿಂದ ಹೊಸಮಠವರೆಗೆ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿ ನಡೆಸುವಲ್ಲಿ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗದ ಎ.ಇ.ಇ. ಗುರುಪ್ರಸಾದ್ ತಿಳಿಸಿದ್ದಾರೆ.
ಉಜಿರೆ-ಪೆರಿಯಶಾಂತಿ ರಸ್ತೆ ಸಮೀಕ್ಷೆ
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆ-ಪೆರಿಯಶಾಂತಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯದ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವದಂತೆ ಕಳೆದ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-೭೫ ಸಂಪರ್ಕಿಸುವ ಉಜಿರೆಯಿಂದ ಪೆರಿಯಶಾಂತಿ ವರೆಗಿನ ೩೦ ಕಿ.ಮೀ. ರಾಜ್ಯ ಹೆದ್ದಾರಿ ೩೭ನ್ನು ರಾಷ್ಟ್ರೀಯ ಹೆದ್ದಾರಿ-೭೩ರ ರಸ್ತೆಯಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ಸರ್ವೇ ಕಾರ್ಯ ಆರಂಭಗೊಂಡಿದ್ದು, ಮುಂದಿನ ಹಂತದಲ್ಲಿ ಉಜಿರೆಯಿಂದ ಧರ್ಮಸ್ಥಳ-ನಿಡ್ಲೆ-ಕೊಕ್ಕಡ ಮಾರ್ಗವಾಗಿ ಪೆರಿಯಶಾಂತಿವರೆಗೆ ೧೦ ಮೀಟರ್ ಅಗಲದ ಚತುಷ್ಪಥ ರಸ್ತೆಯಾಗಲಿದೆ.
ಧಾರ್ಮಿಕ ಕ್ಷೇತ್ರ ಸಹಿತ ಬೆಂಗಳೂರು ಸಂಪರ್ಕಿಸಲು ಬೆಳ್ತಂಗಡಿ ತಾಲೂಕು ದಾಟಿ ಬರುವ ಪ್ರವಾಸಿಗರು ಹಾಗೂ ತಾಲೂಕಿನ ಮಂದಿಗೆ ಅನುಕೂಲ ಕಲ್ಪಿಸಲು ಪೂಂಜಾಲಕಟ್ಟೆ ಚಾರ್ಮಾಡಿ, ಗುರುವಾಯನಕೆರೆ ಮೂಡುಬಿದ್ರೆ-ಕಾರ್ಕಳ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಗರ್ಡಾಡಿಯಲ್ಲಿ ವಿದ್ಯುತ್ ಉಳಿತಾಯದ ಚಿಂತನೆಯಲ್ಲಿ ಸೋಲಾರ್ ದೀಪವು ಹೊಸ ಪ್ರಯತ್ನವಾಗಿದೆ.
ಹರೀಶ್ ಪೂಂಜ, ಶಾಸಕ