ಬೆಳ್ತಂಗಡಿ: ಮಹಿಳೆಯರಲ್ಲಿ ಅಪಾರ ಶಕ್ತಿ-ಸಾಮಥ್ರ್ಯ, ಬುದ್ಧಿವಂತಿಕೆ ಮತ್ತು ವ್ಯವಹಾರ ಕೌಶಲವಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಅವಕಾಶ, ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು, ಬುಧವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಅಂದರೆ ಮಹಿಳೆಯರಲ್ಲಿ ಇರುವ ತಮ್ಮ ಶಕ್ತಿ-ಸಾಮಥ್ರ್ಯ ಮತ್ತು ಕೌಶಲದ ಬಗ್ಯೆ ಅರಿವು, ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಾವು ಸಾವಿರಾರು ವರ್ಷಗಳಿಂದ ಮಹಿಳೆಯರ ಶೋಷಣೆ ಮಾಡುತ್ತಾ ಬಂದಿದ್ದೇವೆ. ಅವರ ಶಾಪ ನಮ್ಮ ಮೇಲೆ ಇದೆ. ಇಂದು ಸರ್ಕಾರ ಮತ್ತು ಸಮಾಜದಿಂದ ಸಿಗುವ ಅವಕಾಶಗಳು, ಶಿಕ್ಷಣ ಹಾಗೂ ಸಾಲ ಸೌಲಭ್ಯದ ಸದುಪಯೋಗ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ವ್ಯವಹಾರದೊಂದಿಗೆ ಯಶಸ್ವಿ ಉದ್ಯಮಿಗಳಾಗಿ ಮಿಂಚುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಚ್ಛತೆ, ಉಳಿತಾಯ, ಕುಟುಂಬ ನಿರ್ವಹಣೆಯಲ್ಲಿ ಅವರು ಯಶಸ್ವಿ ರೂವಾರಿಗಳಾಗಿದ್ದಾರೆ.
ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಭ್ಯ, ಸುಸಂಸ್ಕøತ ನಾಗರಿಕರನ್ನಾಗಿ ರೂಪಿಸಬೇಕು. ಮನೆಯ ಗಂಡಸರು ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ತಮ್ಮ ವ್ಯವಹಾರದ ಲೆಕ್ಕಪತ್ರ ನಿರ್ವಹಣೆ, ಲಾಭ-ನಷ್ಟ ಪರಿಶೀಲನೆ ಮಾಡಿ ಸಾಲ ಮರುಪಾವತಿಯೊಂದಿಗೆ ಸಕಾಲದಲ್ಲಿ ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಮಹಿಳಾ ಸಬಲೀಕರಣದ ಮೂಲಕ ಫಲಾನುಭವಿಗಳ ಕುಟುಂಬದವರ ಭಾಗ್ಯದ ಬಾಗಿಲು ತೆರೆದಿದ್ದು ಎಲ್ಲರೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೃತ ಜೀವನ ಪ್ರಯಾಸ್ ಚಿಂತನ ಕೃತಿ ಬಿಡುಗಡೆಗೊಳಿಸಿದ ಸಿಡ್ಬಿ ಅಧ್ಯಕ್ಷ ಶಿವಸುಬ್ರಹಮಣ್ಯ ರಾಮನ್ ಒಂದು ಸಾವಿರ ಕೋಟಿ ರೂ. ಸಾಲ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥರಿಗೆ ನೀಡಿದರು.
ಸಿಡ್ಬಿಯ ಪ್ರಯಾಸ್ ಯೋಜನೆಯಡಿಯಲ್ಲಿ ಉದ್ದಿಮೆ ಮಾಡುವವರಿಗೆ ಕಡಿಮೆ ಬಡ್ಡಿದರದಲ್ಲಿ ಬೇಕಾದಷ್ಟು ಸಾಲ ನೀಡಲಾಗುತ್ತದೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಾಧನೆಯನ್ನು ಶ್ಲಾಘಿಸಿದ ಅವರು ಶೇ. ನೂರರಷ್ಟು ಸಾಲ ಮರುಪಾವತಿ ಬಗ್ಯೆ ವಿಶೇಷ ಅಭಿನಂದನೆ ಸಲ್ಲಿಸಿದರು.
ಮಹಿಳಾ ಉದ್ದಿಮೆದಾರರು ಉದ್ಯಮ ನೋಂದಾವಣೆ ಮಾಡಿಕೊಂಡು ಲೆಕ್ಕಪತ್ರ ನಿರ್ವಹಣೆಯೊಂದಿಗೆ ಸರ್ಕಾರಕ್ಕೆ ಕೊಡಬೇಕಾದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ಜಿ.ಎಸ್.ಟಿ. ಆದಾಯತೆರಿಗೆ, ಪಾನ್ ಕಾರ್ಡ್ ಬಗ್ಯೆ ಯಾವುದೇ ಭಯ, ಆತಂಕ ಬೇಡ. ಎಲ್ಲರೂ ಸ್ವಾವಲಂಬನೆಯೊಂದಿಗೆ ಜೀವನಮಟ್ಟ ಸುಧಾರಣೆ ಮಾಡಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಿ ಎಂದು ಅವರು ಶುಭ ಹಾರೈಸಿದರು.
ಮಂಗಳೂರಿನ ಅನಂತ ಭಟ್, ಡ್ಯಾಫಿನಿಸ್ಟೆಲ್ಲಾ ಡಿ’ಸೋಜಾ, ಸಿರಿ ಸಂಸ್ಥೆಯ ಪ್ರಸನ್ನ ತೆರಿಗೆ ಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಯೆ ಮಾಹಿತಿ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಸಿಡ್ಬಿಯ ಮುಖ್ಯ ಮಹಾಪ್ರಬಂಧಕ ರವಿತ್ಯಾಗಿ ಮತ್ತು ಉಪಮಹಾಪ್ರಬಂಧಕ ನಿತಿನ್ ಶುಕ್ಲಾ , ಕಾರ್ಯನಿರ್ವಹಣಾಧಿಕಾರಿ ಅನಿಲ್,. ಉಪಸ್ಥಿತರಿದ್ದರು.
ಬಂಟ್ವಾಳದ ಯಶಸ್ವಿ ಮಹಿಳಾ ಉದ್ಯಮಿ ಯೋಗಿತಾ ತಮ್ಮ ಯಶೋಗಾಥೆಯನ್ನು ವಿವರಿಸಿದರು. 350 ಮಹಿಳಾ ಉದ್ಯಮಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಶಿವಾನಂದ ಆಚಾರ್ಯ ಧನ್ಯವಾದವಿತ್ತರು. ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.