ಮೂಡುಬಿದಿರೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಮಿಥುನ್ ರೈ ಅವರು ಮೂಡುಬಿದಿರೆ ಮಸೀದಿಯೊಂದರ ಸಮಾರಂಭದಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು’ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಫೆ.26ರಂದು ಮೂಡುಬಿದಿರೆ ತಾಲೂಕಿನ ಪುತ್ತಿಗೆ ನೂರಾನಿ ಮಸೀದಿಯ ನವೀಕೃತ ಮಸೀದಿಯಲ್ಲಿ `ನಮ್ಮೂರ ಮಸೀದಿ ನೋಡ ಬನ್ನಿ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಿಥುನ್ ರೈ ಸೌಹಾರ್ದತೆಯ ವಿಚಾರದಲ್ಲಿ ಮಾತನಾಡುವಾಗ, ಈ ಜಿಲ್ಲೆ ಸೌಹಾರ್ದತೆಯ ಇತಿಹಾಸ ಹೊಂದಿರುವ ಜಿಲ್ಲೆ, ಬಪ್ಪನಾಡು ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತಾರಿನಲ್ಲಿನ ಕೊರಗಜ್ಜನ ಕಟ್ಟೆಗೆ ಅರ್ಚಕ ಮುಸ್ಲಿಂ ಸಮುದಾಯದವರು.ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗದಲ್ಲಿ ಸರ್ವಧರ್ಮದವರು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದಿದ್ದಾರೆ. ಇದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
ಮಠ ಕಟ್ಟಲು ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು’ ಎನ್ನುವ ಪೇಜಾವರ ಸ್ವಾಮೀಜಿಯವರು ಹಿಂದೆ ನೀಡಿದ ಹೇಳಿಕೆಯ ಪತ್ರಿಕೆಯ ವರದಿಯೊಂದರ ತುಣುಕು ಕೂಡ ಮಿಥುನ್ ರೈ ಅವರನ್ನು ಸಮರ್ಥಿಸಿಕೊಂಡು ಇದರೊಂದಿಗೆ ವೈರಲ್ ಆಗುತ್ತಿದೆ.