ಬಂಟ್ವಾಳ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಲ್ಲಿ ಪೊಳಲಿ – ಕಬಕ ನಡುವಿನ ರಸ್ತೆ ಅಗಲೀಕರಣ ಕಾಮಗಾರಿ ಮರುಗುತ್ತಿಗೆಯ ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕ ವಲಯದಿಂದ ಕಳಪೆ ಕಾಮಗಾರಿಯ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಎಸ್.ಎಚ್.ಡಿ.ಪಿ. ಯೋಜನೆಯ ಬೆಂಗಳೂರು ಅಧಿಕಾರಿಗಳು ಗುರುವಾರ ವಿಟ್ಲ – ಕಬಕ ನಡುವೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ನಮ್ಮ ಅವಧಿಯಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು, ಗುತ್ತಿಗೆದಾರನ ಸಮಸ್ಯೆಯಿಂದ ಕೆಲಸ ಪೂರ್ಣವಾಗದೇ ಉಳಿದುಕೊಂಡಿದೆ. ಈಗ ಮರುಗುತ್ತಿಗೆ ಆಗಿ ನಡೆಯುವ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆಯೇ ಕೆಲಸ ಮಾಡಬೇಕು. ಸಾರ್ವಜನಿಕರಿಂದ ಗುಣಮಟ್ಟದ ಬಗ್ಗೆ ದೂರುಗಳು ಬಂದಾಗ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸ ಬೇಕು ಎಂದರು.
ಎಸ್. ಎಚ್. ಡಿ. ಪಿ. ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಪಾಟೀಲ್ ಮಾತನಾಡಿ ಕಬಕ – ವಿಟ್ಲ ರಸ್ತೆಗೆ ಬೇಕಾದ ಡಾಂಬರು ಕಾರ್ಕಳದಲ್ಲಿ ಮಿಶ್ರಣವಾಗಿ ವಿಟ್ಲಕ್ಕೆ ಆಗಮಿಸುತ್ತಿದ್ದು, ಗುಣಮಟ್ಟದಲ್ಲಿ ಅನುಮಾನಗಳು ಬಂದಲ್ಲಿ ತಕ್ಷಣ ತಪಾಸಣೆಗೆ ವ್ಯವಸ್ಥೆಯನ್ನು ಸ್ಥಳದಲ್ಲೇ ಕಲ್ಪಿಸಲಾಗಿದೆ. ಡಾಂಬರು ಮಿಶ್ರಿತ ಜಲ್ಲಿಯ ತೂಕ ಹಾಗೂ ಜಲ್ಲಿಯಿಂದ ಡಾಂಬರು ಮಿಶ್ರಣವನ್ನು ಬೇರ್ಪಡಿಸಿದಾಗ ಬರುವ ತೂಕದ ನಡುವಿನ ವ್ಯತ್ಯಾಸವನ್ನು ಶೇಕಡಾ ತೆಗೆದಾಗ ಡಾಂಬರಿನ ಗುಣಮಟ್ಟ ಸಿಗುತ್ತದೆ. ಸದ್ಯ ಕಬಕ ವಿಟ್ಲ ರಸ್ತೆಯ ಗುಣಮಟ್ಟ 4.5ಕ್ಕಿಂತ ಅಧಿಕ ಇರಬೇಕಾಗಿದೆ. ಈಗ ನಡೆದ ಡಾಂಬರಿನ ಮೇಲೆ ಇನ್ನೊಂದು ಪದರ ಡಾಂಬರು ಹಾಕಲಿದ್ದು, ಆ ಬಳಿಕ ಎರಡು ವರ್ಷಗಳ ಕಾಲ ಗುತ್ತಿಗೆದಾರ ರಸ್ತೆಯ ನಿರ್ವಹಣೆಯನ್ನು ಮಾಡಬೇಕಾಗಿದೆ ಎಂದರು.
ಮುಖಂಡರಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಎಸ್.ಎಚ್.ಡಿ. ಪಿ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದನ್ ಕುಮಾರ್, ಪಿ.ಎಂ.ಸಿ. ವಿಭಾಗದ ವಿಜಯ ಕುಮಾರ್, ಸ್ಕಂದ, ಗುತ್ತಿಗೆದಾರ ಪರವಾಗಿ ಅರ್ಜುನ್ ಮತ್ತಿತರರು ಹಾಜರಿದ್ದು, ಗುಣಮಟ್ಟ ಪರಿಶೀಲನೆಯನ್ನು ನಡೆಸಿದರು.