ಉಜಿರೆ, ಮಾ.20: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ‘ಇಲಿಬೋನು’ ಕಿರುಚಿತ್ರವು ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ದೃಶ್ಯ ಸಂವಹನ ವಿಭಾಗ ಆಯೋಜಿಸಿದ್ದ ‘ಸಿನಿರಮಾ 2023’ ರಾಷ್ಟ್ರಮಟ್ಟದ ಕಿರುಚಿತ್ರೋತ್ಸವದಲ್ಲಿ ತೃತೀಯ ಬಹುಮಾನ ಪಡೆದಿದೆ.
ಮೈಸೂರಿನ ಬೋಗಾದಿಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಮಾ.10, 11 ರಂದು ಕಿರುಚಿತ್ರೋತ್ಸವ ನಡೆದಿದ್ದು, ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಟ, ನಿರ್ಮಾಪಕ ಡಾಲಿ ಧನಂಜಯ್ ಪ್ರಶಸ್ತಿ ಪ್ರದಾನ ಮಾಡಿದರು. ‘ಇಲಿಬೋನು’ ನಿರ್ದೇಶಕ ಸಂಪತ್ ಕುಮಾರ್ ರೈ ಹಾಗೂ ಸಂಕಲನಕಾರ, ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋದ ಡೈರೆಕ್ಟರ್- ವಿಡಿಯೋ ಪ್ರೊಡಕ್ಷನ್ಸ್ ರಕ್ಷಿತ್ ರೈ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿಯು ಐದು ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಿದೆ.
ಇಲಿಬೋನು ಕಿರುಚಿತ್ರ
29 ನಿಮಿಷಗಳ ಅವಧಿಯ ‘ಡಾರ್ಕ್ ಹ್ಯೂಮರ್’ ಕಿರುಚಿತ್ರ ‘ಇಲಿಬೋನು’ ಉಜಿರೆ ಎಸ್.ಡಿ.ಎಂ. ಕಾಲೇಜಿನ ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋದ ಪ್ರಸ್ತುತಿಯಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿ ಸಂಪತ್ ಕುಮಾರ್ ರೈ ಅವರು ಕಥೆ-ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶಿಸಿದ್ದು, ಪಾತ್ರ ನಿರ್ವಹಣೆಯನ್ನೂ ಮಾಡಿದ್ದಾರೆ.
ಬ್ಲ್ಯಾಕ್ ಹ್ಯೂಮರ್ ಅಥವಾ ಡಾರ್ಕ್ ಕಾಮಿಡಿ ಶೈಲಿಯಲ್ಲಿರುವ ಈ ಕಿರುಚಿತ್ರವು ಫೋನ್/ ಸಾಮಾಜಿಕ ಮಾಧ್ಯಮ ದುರ್ಬಳಕೆ ಹಾಗೂ ಅದಕ್ಕೆ ಅಮಾಯಕರು ಬಲಿಪಶುಗಳಾಗುವ ಬಗೆಯನ್ನು ತೋರಿಸುವ ಜತೆ-ಜತೆಗೆ, ತಂದೆ-ಮಗನ ನಡುವೆ ಇರಬೇಕಾದ ಬಾಂಧವ್ಯ ಇತ್ಯಾದಿ ಮೌಲ್ಯಗಳನ್ನು ತೋರಿಸುತ್ತದೆ.
2022ರ ಸೆ.2ರಂದು ಬಿಡುಗಡೆಯಾದ ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದ- ಧರ್ಮಸ್ಥಳದ ಶಶಿಧರ್ ಕೆ. (ಶಂಭು) ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ನಟಿಸಿದ್ದಾರೆ.