ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಭೂಗೋಳಶಾಸ್ತ್ರ ವಿಭಾಗ ಮತ್ತು ಮಂಗಳ ಯೋಜನೆ – ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ ಅಡಿಯಲ್ಲಿ “ಅಂತಾರಾಷ್ಟ್ರೀಯ ಅರಣ್ಯ ದಿನ” ಮತ್ತು “ವಿಶ್ವ ಜಲ ದಿನಾಚರಣೆ : ೨೦೨೩ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಕಾಶ್ ಎಸ್ . ನೆಟಲ್‍ಕರ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆ. ಸಿ. ಡಿ. ಸಿ. ನಿಗಮ, ಮಂಗಳೂರು ಅವರು ದಿಕ್ಸೂಚಿ ಭಾಷಣ ಮಾಡಿದರು. ಅರಣ್ಯಗಳು ನಮಗೆ ಉಸಿರಾಡಲು ಆಮ್ಲಜನಕ, ಆಶ್ರಯ, ಉದ್ಯೋಗ, ನೀರು, ಪೋಷಣೆ, ಔಷಧಿಗಳು, ಮತ್ತು ಇಂಧನವನ್ನು ಒದಗಿಸುತ್ತವೆ.
ಪ್ರಪಂಚದಾದ್ಯಂತ 1.6 ಶತಕೋಟಿಗೂ ಹೆಚ್ಚು ಜನರು ಆಹಾರ ಅಥವಾ ಬದುಕಿಗಾಗಿ ಅರಣ್ಯಗಳನ್ನೇ ಅವಲಂಬಿಸಿರುತ್ತಾರೆ. ಅರಣ್ಯಗಳು ಮಣ್ಣಿನ ಸವೆತವನ್ನು ತಡೆಗಟ್ಟಲು, ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಸಂರಕ್ಷಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಭೂಕುಸಿತಗಳು ಮತ್ತು ಪ್ರವಾಹಗಳಿಂದ ಸಮುದಾಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜಾಗತಿಕ ಜಲಚಕ್ರದಲ್ಲಿ ಅರಣ್ಯಗಳು ಪ್ರಮುಖ ಪಾತ್ರವಹಿಸುತ್ತವೆ, ನೀರಿನ ಆವಿಯನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಮಳೆಯನ್ನು ಸೆರೆಹಿಡಿಯುವ ಮೂಲಕ ಭೂಮಿಯಾದ್ಯಂತ ನೀರನ್ನು ಚಲಿಸುತ್ತವೆ. ಅಷ್ಟು ಮಾತ್ರವಲ್ಲದೇ ಮಾಲಿನ್ಯ ಮತ್ತು ರಾಸಾಯನಿಕಗಳನ್ನು ಶೋಧಿಸಿ ಮಾನವನ ಬಳಕೆಗೆ ಲಭ್ಯವಿರುವ ನೀರಿನ ಗುಣಮಟ್ಟವನ್ನು ಕಾಪಾಡುತ್ತದೆ. ಕಾಡುಗಳ ನಾಶವು ಹವಾಗುಣ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಕೃಷಿಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ನಾವು ತಿನ್ನುವ ಆಹಾರದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದುದರಿಂದ ಉಳಿದಿರುವ ಅರಣ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಪೋಷಿಸಿ ಅರಣ್ಯೀಕರಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ತಮ್ಮ ಭಾಷಣದಲ್ಲಿ ಕರೆನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳು ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವ ಜಲ ದಿನ, ಅಂತಾರಾಷ್ಟ್ರೀಯ ಅರಣ್ಯ ದಿನ ಅಥವಾ ಇನ್ನಿತರ ಯಾವುದೇ ಪರಿಸರ ಸಂರಕ್ಷಣಾ ದಿನಾಚರಣೆಗಳನ್ನು ಕೇವಲ ಆಯಾಯ ದಿನಗಳಿಗೆ ಮಾತ್ರ ಸೀಮಿತಗೊಳಿಸದೇ ಪ್ರತಿ ದಿನವು ನಾವು ಪರಿಸರ ಸ್ನೇಹಿಯಾಗಿ ಬದುಕಬೇಕು. ಅರಣ್ಯಗಳು ಉತ್ತಮ ಆರೋಗ್ಯಕ್ಕೆ ಬಹಳಷ್ಟು ಕೊಡುಗೆ ನೀಡುತ್ತವೆ. ನೀರನ್ನು ಶುದ್ಧೀಕರಿಸಲು, ಗಾಳಿಯನ್ನು ಸ್ವಚ್ಛಗೊಳಿಸುವಲ್ಲಿ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಇಂಗಾಲವನ್ನು ಸೆರೆಹಿಡಿಯುವಲ್ಲಿ, ಆಹಾರ ಮತ್ತು ಜೀವ ಉಳಿಸುವ ಔಷಧಿಗಳನ್ನು ಒದಗಿಸುವಲ್ಲಿ ಹಾಗೂ ನಮ್ಮ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಅರಣ್ಯಗಳ ಪಾತ್ರ ಮಹತ್ತರವಾದದ್ದು. ಈ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮ ಕೈಯಲ್ಲಿದೆ ಮತ್ತು ಅದು ನಮ್ಮ ಜವಾಬ್ದಾರಿ ಕೂಡ. ಪರಿಸರ-ಸ್ನೇಹಿ ಕೆಲಸಗಳೆಂದರೆ ಬೀಜ ಬಿತ್ತಿದಂತೆ. ಅದು ಬೆಳೆದು ಫಲ ಕೊಡುವುದಲ್ಲದೆ ಮತ್ತೆ ಬೀಜವನ್ನು ಒದಗಿಸುತ್ತದೆ.
ಮಾರ್ಚ್ 22, ವಿಶ್ವ ಜಲ ದಿನ, ಜಗತ್ತಿನಾದ್ಯಂತ , ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ನಿಗದಿಪಡಿಸಲಾಗಿದೆ. ‘ಬದಲಾವಣೆಯನ್ನು ವೇಗಗೊಳಿಸುವುದು’ ಎಂಬ ಕೇಂದ್ರ ವಿಷಯದೊಂದಿಗೆ 2023 ರ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. ಖಂಡಿತವಾಗಿಯೂ, ನೀರಿನ ಸಂರಕ್ಷಣೆಯ ಕಾರ್ಯತಂತ್ರಗಳನ್ನು ಇನ್ನಷ್ಟೂ ವೇಗಗೊಳಿಸುವ ಅವಶ್ಯಕತೆಯಿದೆ. ವೈಯಕ್ತಿಕ, ಸಂಘಟನೆ, ಮತ್ತು ಸರ್ಕಾರ ಮಟ್ಟದಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಮತ್ತು ನಮ್ಮ ಮುಂದಿನ ಪೀಳಿಗೆಯು ನೀರಿನ ಕೊರತೆ ಮತ್ತು ನೀರಿನಿಂದ ಹರಡುವ ರೋಗಗಳ ವಿಷಯದಲ್ಲಿ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಂಗಳಾ ಯೋಜನೆಯ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಮನುಷ್ಯನು ಸ್ವಾರ್ಥ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪೃಕೃತಿಯ ಮೇಲೆ ಮಾಡಿದ ದಬ್ಬಾಳಿಕೆಯಿಂದ ಈಗಾಗಲೇ ಅನೇಕ ವನ್ಯಜೀವಿಗಳು ನಾಶಹೊಂದಿವೆ, ಇನ್ನೂ ಅನೇಕ ಜೀವಿಗಳು ವಿನಾಶದಂಚಿನಲ್ಲಿವೆ. ಮಾತ್ರವಲ್ಲ, “ಮಾಡಿದ್ದುಣ್ಣು ಮಹರಾಯ ಅನ್ನುವಂತೆ”, ಮನುಷ್ಯನೇ ಈಗ ಪರಿಸರ ಮಾಲಿನ್ಯದಿಂದ ಉಂಟಾದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯು ಜ್ವರ, ಚಿಕನ್ಗೂನ್ಯ, ಮಲೇರಿಯ, ಇಲಿಜ್ವರ ಮುಂತಾದ ಸಾಂಕ್ರಾಮಿಕ ರೋಗಗಳಿಗೆ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಭೂಮಂಡಲದ ತಾಪಮಾನ ಏರುವಿಕೆ ಮತ್ತು ಹವಾಮಾನ ಬದಲಾವಣೆಯೇ ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಪರಿಸರ ಮಾಲಿನ್ಯದಿಂದ ಕ್ಯಾನ್ಸರ್ ಮತ್ತು ಉಸಿರಾಟ-ಸಮಸ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇಷ್ಟು ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಉಂಟಾಗುತ್ತಿರುವ ಅಕಾಲಿಕ ಮಳೆ, ನೆರೆ, ಕ್ಷಾಮ, ಸಮುದ್ರಕೊರೆತ, ಬರಗಾಲದಂತಹ ದುಸ್ಥಿತಿಗಳಿಂದ ಅನೇಕ ಕಷ್ಟನಷ್ಟ, ಸಾವು ನೋವುಗಳನ್ನು ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಇನ್ನಷ್ಟು ಭೀಕರ ದುರಂತಗಳಿಗೆ ಕಾಲ ಸನ್ನಿಹಿತವಾಗಬಹುದು.
COVID-19 ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಗಳ ಅವಧಿಯಲ್ಲಿ, ವಾಯುಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಅನೇಕ ಸಂಶೋಧನೆಗಳಿಂದ ನಿರೂಪಿತವಾಗಿದೆ. ಮಾತ್ರವಲ್ಲ, ವಲಸೆ ಪಕ್ಷಿಗಳೂ ಸೇರಿದಂತೆ ಅನೇಕ ವನ್ಯಜೀವಿಗಳ ಬದುಕು ಮರುಸ್ಥಿತಿಗೆ ಬಂದಿರುವುದು ವರದಿಯಾಗಿವೆ. ಪರಿಸರದ ಅವನತಿಗೆ ನಾವು ಮನುಷ್ಯರೇ ಕಾರಣ ಅನ್ನುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈಗಾಗಲೇ ನಾವು ಮರು ಸ್ಥಿತಿಗೆ ತರಲಾರದಷ್ಟು ಪರಿಸರವನ್ನು ಸಾಕಷ್ಟು ಹಾನಿ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ನೈರ್ಮಲ್ಯವನ್ನು ಕಾಪಾಡಲು ಮತ್ತು ಸಂರಕ್ಷಿಸಲು ಕಾರ್ಯಪ್ರವೃತ್ತರಾಗಬೇಕಾಗಿರುವುದು ಪರಿಸರ ಸಂರಕ್ಷಣೆ ಅಂದ ತಕ್ಷಣ ಸರಕಾರ, ಸಂಸ್ಥೆ, ಕೈಗಾರಿಕೋದ್ಯಮಿ, ಬಂಡವಾಳ ಶಾಹಿಗಳ ಅಥವಾ ಇನ್ನಾವುದೋ ದೇಶದ ಕಡೆಗೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಬದಲಾಗಿ ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಮಗೆ ಬದುಕಲು ಆಮ್ಲಜನಕ, ನೀರು, ಆಹಾರ, ನೆಲೆ ಎಲ್ಲವನ್ನೂ ನೀಡುವ ಪರಿಸರವನ್ನು ಸಂರಕ್ಷಿಸಲು ನಾವು ಕಾರ್ಯೋನ್ಮುಖರಾಗಬೇಕಿದೆ. ನಮ್ಮ ದೈನಂದಿನ ಜೀವನದಲ್ಲಿ ಪರಿಸರ-ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಂಡು ನಮಗೆ ಆಸರೆಯಾಗಿರುವ ಭೂಮಿಯನ್ನು ಉಳಿಸಿ ಕೊಳ್ಳುವಲ್ಲಿ ಅಳಿಲುಸೇವೆ ಸಲ್ಲಿಸೋಣ. ಎಂದು ಉಲ್ಲೇಖಿಸಿದರು.
ಕಾರ್ಯಕ್ರಮದ ಅಂಗವಾಗಿ ಕ್ಯಾಂಪಸ್ ನಲ್ಲಿ ಪಕ್ಷಿಗಳಿಗೆ ನೀರಿನ ಬಟ್ಟಲುಗಳನ್ನು ಇಡಲಾಯಿತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ನೀಡುವ ಗಿಡಗಳನ್ನು ವಿತರಿಸಲಾಯಿತು. ಅರಣ್ಯ ಮತ್ತು ನೀರಿನ ಸಂರಕ್ಷಣೆಯಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಸಿಗಳನ್ನು ನೆಡಲಾಯಿತು.
ಭೂಗೋಳಸಾಸ್ತ್ರ ವಿಭಾಗದ ಸಂಯೋಜಕರಾದ ಪ್ರೊ. ದಶರಥ ಪಿ. ಅಂಗಡಿ ಅವರು ಸ್ವಾಗತಿಸಿ ವಿಶ್ವ ಜಲ ದಿನ ಮತ್ತು ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಹೇಳಿದರು.
ಪೂಜಿತ್ ಕುಮಾರ್ ಡಿ.ಪಿ. ಅವರು ವಂದನಾರ್ಪಣೆ ಗೈದರು. ಡಾ.ಅನುಶ್ರೀ ಎಂ ಮತ್ತು ಡಾ.ಲವೀನಾ ಕಾರ್ಯಕ್ರಮ ನಿರೂಪಣೆ ಮಾಡಿದರು.