ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಯಾತ್ರಿ ನಿವಾಸದ ಕಟ್ಟಡನಿರ್ಮಾಣ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್,ಅತ್ಯಂತ ಪುರಾತನ ದೇವಾಲಯವಾಗಿರುವ ಮಂಗಳಾದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದ ಆಗಮಿಸುವ ಭಕ್ತಾಧಿಗಳಉಪಯೋಗಕ್ಕಾಗಿ ನಿರ್ಮಾಣಗೊಳ್ಳುವ ಯಾತ್ರಿ ನಿವಾಸದ ಕಟ್ಟಡಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಮೊದಲ ಹಂತದಲ್ಲಿ 50 ಲಕ್ಷದಂತೆ ಎರಡು ಕಂತುಗಳಾಗಿ ಒಟ್ಟು 1 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಸ್ಥಳೀಯ ಕಾರ್ಪೋರೇಟರ್ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಯಾತ್ರಿ ನಿವಾಸದ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಉಂಟಾದಾಗ ಶಾಸಕರ ನೇತೃತ್ವದಲ್ಲಿ ಅದನ್ನು ಪರಿಹರಿಸಿ ಸ್ಥಳ ಒದಗಿಸಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಪಾಲಿಕೆಯ ಮೂಲಕ ಕ್ಷೇತ್ರದ ಪರಿಸರದಲ್ಲಿ ದೀಪಾಲಂಕಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯ ಖರ್ಚನ್ನು ಪಾಲಿಕೆಯಿಂದ ಭರಿಸಲಾಗುತ್ತಿದೆ. ದೇವಸ್ಥಾನದ ದಕ್ಷಿಣ ಭಾಗದಲ್ಲಿರುವ ಜಾಗದಲ್ಲಿ ಅನ್ನಛತ್ರ ನಿರ್ಮಿಸುವ ಯೋಜನೆಯಿತ್ತು. ಅದಕ್ಕೆ ಶಾಸಕರ ಸಹಕಾರದೊಂದಿಗೆ ಪುರಾತತ್ವ ಇಲಾಖೆಯಿಂದ ನಿರಾಪೇಕ್ಷಣಾ ಪತ್ರವನ್ನು ತಂದು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಆ ಮೂಲಕ ಸುಸಜ್ಜಿತ ಅನ್ನಛತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ರಾಜ್ಯ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ನಿತಿನ್ ಕುಮಾರ್, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರಮಾನಂದ ಹೆಗ್ಡೆ, ರಾಮ್ ನಾಯ್ಕ್, ಹರೀಶ್ ಐತಾಳ್, ರಘುರಾಮ್ ಉಪಾಧ್ಯಯ, ಶ್ರೀನಿವಾಸ್ ಐತಾಳ್, ವೇದಮೂರ್ತಿ ಸುಬ್ರಹ್ಮಣ್ಯ ಐತಾಳ್, ರಾಮಚಂದ್ರ ಐತಾಳ್, ಶ್ರೀ ಹಳೇ ಕೋಟೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ್, ಸಿಬ್ಬಂದಿಗಳಾದ ರಂಜಿತ್, ವಿನಯ್ ಮಾಸ್ಟರ್, ಹಾಗೂ ಇತರ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸುಧಾಕರ್ ರಾವ್ ಪೇಜಾವರ ಅವರು ನೆರವೇರಿಸಿದರು.