ಉಳ್ಳಾಲ: ತಲಪಾಡಿ ಟೊಡ್ಡಿ ಶಾಪ್ ಎದುರುಗಡೆ ರಾ.ಹೆ.66 ರಲ್ಲಿ ಸಂಭವಿಸದ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆದ್ದಾರಿ ಸಂಸ್ಥೆಯ ನವಯುಗ ಟೋಲ್ ಆಂಬ್ಯುಲೆನ್ಸ್ ಸಿಗದೆ, ಹಲವು ನಿಮಿಷಗಳ ಕಾಲ ಗಾಯಾಳುಗಳಿಬ್ಬರು ರಸ್ತೆಯಲ್ಲೇ ಉಳಿದು ನಂತರ ಬೇರೊಂದು ಖಾಸಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ. ಟೋಲ್ ಸಂಸ್ಥೆಗೆ ಸೇರಿದ ಆಂಬ್ಯುಲೆನ್ಸ್ ಗಳೆರಡು ನಿರ್ವಹಣೆಯಿಲ್ಲದೆ ಗುಜರಿ ಸೇರಿರುವುದರ ವಿರುದ್ಧ ಸ್ಥಳೀಯರು ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತೂರಿನಿಂದ ತಲಪಾಡಿವರೆಗೂ ನವಯುಗ ಸಂಸ್ಥೆ ರಾ.ಹೆ.66ರ ನಿರ್ವಹಣೆ ನಡೆಸುತ್ತಿದ್ದರೂ, ಜನರಿಗೆ ಸುರಕ್ಷತೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಪಘಾತದ ಸಂದರ್ಭ ತುರ್ತಾಗಿ ಕಾರ್ಯಾಚರಿಸಬೇಕಾದ ನವಯುಗ ಸಂಸ್ಥೆಯ ಎರಡು ಆಂಬ್ಯುಲೆನ್ಸ್ ವಾಹನಗಳು ಮೂಲೆ ಸೇರಿದೆ. ಕಾನೂನು ರೀತಿ ಎರಡು ಆಂಬ್ಯುಲೆನ್ಸ್ ಕಾರ್ಯಾಚರಿಸಬೇಕಿದ್ದರೂ, ನಿರ್ವಹಣೆ ಕಷ್ಟವೆಂದು ಸಂಸ್ಥೆಯವರು ಸಂಘಟನೆಗೆ ಸೇರಿದ ಆಂಬ್ಯುಲೆನ್ಸ್ ಮೂಲಕ ಸೇವೆ ನೀಡಲು ಮುಂದಾಗಿದ್ದಾರೆ. ಆದರೆ ಮೊನ್ನೆ ನಡೆದ ಅಪಘಾತದ ಸಂದರ್ಭ ಸಂಘಟನೆಯ ಆಂಬ್ಯುಲೆನ್ಸ್ ಕೂಡಾ ಬಾರದೆ ಗಾಯಾಳುಗಳು ಹಲವು ನಿಮಿಷಗಳ ಕಾಲ ಕಾದು ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದು ಆಸ್ಪತ್ರೆಗೆ ಕಳುಹಿಸಲಾಗಿದೆ.
ನವಯುಗ ಸಂಸ್ಥೆಗೆ ಸೇರಿದ ಎರಡು ಆಂಬ್ಯುಲೆನ್ಸ್ ಗಳು ಟೋಲ್ ಬೂತ್ ಸಮೀಪವೇ ನಿಲ್ಲಿಸಲಾಗಿದ್ದು, ನಿರ್ವಹಣೆಯಿಲ್ಲದೆ ಅದರೊಳಗೆ ಮದ್ಯದ ಬಾಟಲಿಗಳಿಂದ ತುಂಬಿದೆ. ವರ್ಷಗಳಿಂದ ಮೂಲೆ ಸೇರಿರುವ ಆಂಬ್ಯುಲೆನ್ಸ್ ಗಳಿಗೆ ಇನ್ನೂ ಕಾಯಕಲ್ಪ ದೊರೆತಿಲ್ಲ. ತಲಪಾಡಿ ಟೋಲ್ ಸಮೀಪದಲ್ಲೇ ರಾ.ಹೆ.ಯುದ್ದಕ್ಕೂ ದಾರಿದೀಪಗಳು ಉರಿಯದೆ ವಾಹನ ಸವಾರರು, ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ.
ಎಲ್ಲವೂ ಸೆಂಟ್ರಲ್ : ಟೋಲ್ ಸಂಸ್ಥೆ ಹೊರರಾಜ್ಯಕ್ಕೆ ಸೇರಿರುವುದರಿಂದ ಅದರಲ್ಲಿ ನಿರ್ವಹಿಸುವ ಸಿಬ್ಬಂದಿಯೂ ಹೊರರಾಜ್ಯದವರೇ ಆಗಿದ್ದಾರೆ. ತಲಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಟೋಲ್ ಬೂತ್ ಕಾರ್ಯಚರಿಸುತ್ತಿದ್ದರೂ ಗ್ರಾ.ಪಂ.ಗೆ ಕೊಡಬೇಕಾದ ಕನಿಷ್ಠ ಗೌರವವನ್ನು ನೀಡಲಾಗುತ್ತಿಲ್ಲ ಅನ್ನುವ ಆರೋಪ ವ್ಯಕ್ತವಾಗಿದೆ. ದಾರಿದೀಪಗಳು, ಸರ್ವಿಸ್ ರಸ್ತೆ, ಆಂಬ್ಯುಲೆನ್ಸ್ ಸೇವೆ ಕುರಿತು ತಲಪಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದೂರಿಕೊಂಡು ಬಂದರೂ, ಈವರೆಗೆ ಗ್ರಾಮದ ಮೂಲಭೂತ ಸೇವೆಗಳನ್ನು ಒದಗಿಸುವಲ್ಲಿ ಸಂಸ್ಥೆ ವಿಫಲವಾಗಿದೆ ಅನ್ನುವ ಆರೋಪ ಕೇಳಿಬಂದಿದೆ.
ಸಾಲು ಸಾಲು ಅಪಘಾತಗಳು: ಕೊಲ್ಯ ರಮಾನಂದಾಶ್ರಮ , ಬೀರಿ ಉಚ್ಚಿಲ , ತೊಕ್ಕೊಟ್ಟು ಕಾಪಿಕಾಡು ರಾ.ಹೆ.66 ಗಳಲ್ಲಿ ವಿರುದ್ಧ ಧಿಕ್ಕಿನಲ್ಲಿ ವಾಹನಗಳು ಸಂಚರಿಸುವುದರಿಂದ ಅಪಘಾತಗಳು ಸಾಲು ಸಾಲಾಗಿ ಸಂಭವಿಸುತ್ತಲೇ ಇವೆ. ಸರ್ವಿಸ್ ರಸ್ತೆಯ ವ್ಯವಸ್ಥೆಯಿಲ್ಲದೆ ಅನಾಹುತಗಳು ಸಂಭವಿಸುತ್ತಿದ್ದರೂ, ಕನಿಷ್ಠ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ತಕ್ಷಣದಿಂದ ಜಿಲ್ಲಾಡಳಿತ ಜಾರಿಗೊಳಿಸುವಂತೆ ಆದೇಶ ಹೊರಡಿಸಬೇಕು ಅನ್ನುವ ಆಗ್ರಹವನ್ನು ಜನರು ಮಾಡಿದ್ದಾರೆ.