ಮಂಗಳೂರು: ದಕ್ಷಿಣ ಕನ್ನಡ ಸಂಘ-ಪರಿವಾರದ ಭದ್ರಕೋಟೆಯಾಗಿದ್ದು, ಈ ಬಾರಿ ಇಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಹಾಲಿ ಅಭ್ಯರ್ಥಿಗಳು, ಸಂಘ ಪರಿವಾರದ ಮುಖಂಡರ ನಡುವೆಯೇ ಜಿದ್ದಾಜಿದ್ದಿನ ಹೋರಾಟ, ತಂತ್ರ ಪ್ರತಿತಂತ್ರ ನಡೆದಿದೆ.
ಈ ಕಾರಣದಿಂದ ಈ ಬಾರಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಭಿನ್ನ ತಂತ್ರದ ಮೊರೆಹೋಗಿದೆ. ಆಂತರಿಕ ಭಿನ್ನಾಭಿಪ್ರಾಯ ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಮಂಗಳೂರಿನ ಸಂಘ ನಿಕೇತನದಲ್ಲಿಎಂಟು ವಿಧಾನ ಸಭಾ ಕ್ಷೇತ್ರಕ್ಕೂ ಇಂದು ಅಭಿಪ್ರಾಯ ಸಂಗ್ರಹ ನಡೆದಿದ್ದು, ಒಂದೊಂದು ಕ್ಷೇತ್ರಕ್ಕೆ ಒಂದು ಗಂಟೆ ಕಾಲಾವಕಾಶ ನೀಡಲಾಗಿತ್ತು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ವೇದಿಕೆಯಲ್ಲಿ ಹಾಸನದ ಶಾಸಕ ಪ್ರೀತಮ್ ಗೌಡ, ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ವಿಧಾನ ಪರಿಷತ್ ನ ಸದಸ್ಯ ಅರುಣ್, ಮೊದಲಾದವರಿದ್ದರು. ಪುತ್ತೂರಿನಿಂದ ಅಭಿಪ್ರಾಯ ಸಂಗ್ರಹಕ್ಕೆ ಶಾಸಕ ಸಂಜೀವ ಮಠಂದೂರು ಸಹಿತ ಸುಮಾರು 125 ಮಂದಿ ಭಾಗವಹಿಸಿದ್ದರು.
ಅಭಿಪ್ರಾಯ ಸಂಗ್ರಹ ಹೀಗಿತ್ತು: ಈ ಮೊದಲು ಅಸ್ತಿತ್ವದಲ್ಲಿದ್ದ ಚುನಾವಣಾ ಬ್ಯಾಲೆಟ್ ಶೀಟ್ ಮಾದರಿಯಲ್ಲಿಯೇ ಅಭಿಪ್ರಾಯ ಸಂಗ್ರಹ ಪತ್ರ ಇದ್ದು, ಬ್ಯಾಲೆಟ್ ಶೀಟ್ ಮೇಲ್ಬಾಗದ ಎಡ ಮತ್ತು ಬಲದಲ್ಲಿ ಬಿಜೆಪಿ ಪಕ್ಷದ ಚಿಹ್ನೆ, ಮಧ್ಯದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ 2023 ಎಂದು ಶೀರ್ಷಿಕೆ ಬರೆದಿದ್ದು, ನಂತರ ನಂಬರ್, ಶೀರ್ಷಿಕೆಯಡಿಯಲ್ಲಿ ಮೂರು ಅಭ್ಯರ್ಥಿಗಳನ್ನು ಹೆಸರಿಸಲು ಜಾಗ, ಕೆಳಗೆ ಬರೆದವರ ಹೆಸರು ಮತ್ತು ಮೊಬೈಲ್ ನಂಬರ್, ಪ್ರತ್ಯೇಕವಾಗಿ ಯಾರ ಹೆಸರನ್ನು ಉಲ್ಲೇಖಿಸದೆ ತಮಗೆ ಇಷ್ಟವಾದ ಅಭ್ಯರ್ಥಿಯ ಹೆಸರನ್ನು ಬರೆಯಲು ಅವಕಾಶ ಕಲ್ಪಿಸಲಾಗಿತ್ತು.