ಮಂಗಳೂರು: ಮಾ.25 ರಿಂದ ವಾಟ್ಸಪ್‌ನಲ್ಲಿ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದ ಭಾಷಣದಲ್ಲಿ ಡಾ. ಎಂ.ಕೆ.ಪ್ರಸಾದ್ ಕ್ರೈಸ್ತ ಸಮುದಾಯದ ವಿರುದ್ದ ಮಾತನಾಡಿದ ವಿಡಿಯೋ ಹರಿದಾಡುತ್ತಿದೆ. ಇದರಿಂದ ಸಮಾಜ ಶಾಂತಿಗೆ ಧಕ್ಕೆಯಾಗುತ್ತಿದೆ ಎಂದು ಕ್ರೈಸ್ತ ಮುಖಂಡರು ಎಸ್‌ಪಿಗೆ ದೂರು ನೀಡಿದ್ದಾರೆ.
“ಕ್ರೈಸ್ತರು ನಡೆಸುತ್ತಿರುವ ಸಂಸ್ಥೆಗಳು ಬ್ರಿಟಿಷರು ನೀಡಿರುವ ಜಾಗಗಳಾಗಿದ್ದು ನಮಗೆ (ಹಿಂದುಗಳಿಗೆ) ಈಗ ಜಾಗವಿಲ್ಲದಂತಾಗಿದೆ. ನಮಗೆ ಭಾರತ ದೇಶ ಒಂದೇ. ಇವರೆಲ್ಲರು (ಕ್ರೈಸ್ತರು) ನಮ್ಮನ್ನು ದೇಶದಿಂದ ಹೊರಗೆ ಓಡಿಸಿದರೆ ನಾವು ಎಲ್ಲಿ ಓಡುವುದು. ನಾವು ಸಮುದ್ರಕ್ಕೆ ಹಾರಬೇಕು ಅಷ್ಟೆ” ಎಂದು ಹೇಳಿದ್ದಾರೆ.
ಕ್ರೈಸ್ತರು ನಡೆಸುವಂತ ಸೆಂಟ್ ಫಿಲೋಮಿನಾ ಸಂಸ್ಥೆ, ಪುತ್ತೂರು, ಬೆಥನಿ ಸಂಸ್ಥೆ, ಸೆಂಟ್ ವಿಕ್ಟರ್ ಸಂಸ್ಥೆ ಮುಂತಾದ ಸಂಸ್ಥೆಗಳ ಹೆಸರನ್ನು ಹೇಳಿ, ಈ ಎಲ್ಲ ಸಂಸ್ಥೆಗಳಿಗೆ ಜಾಗವನ್ನು ಕೊಟ್ಟು ನಮಗೆ ಈಗ ಜಾಗ ಪಡೆಯಲು ಕಷ್ಟಕರವಾಗಿದೆ “ ಎಂದು ಹೇಳಿದ್ದಾರೆ.
ಎಂ.ಕೆ.ಪ್ರಸಾದ್ ನೀಡಿರುವ ಭಾಷಣದಿಂದ ಹಲವಾರು ಯುವಕರ ಮನಸಿನಲ್ಲಿ ಕ್ರೈಸ್ತರ ಮೇಲೆ ದ್ವೇಷ ಮೂಡಿರಬಹುದು. ಇದಲ್ಲದೆ ಈ ಭಾಷಣವು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು ಸಮಾಜದಲ್ಲಿ ಕ್ರೈಸ್ತರ ವಿರುದ್ದ ದ್ವೇಷ ಹುಟ್ಟಿಸಿ ಅಶಾಂತಿ, ಅಸಮಾಧಾನ ತರುವಂತಾಗಿದೆ. ಸತ್ಯಕ್ಕೆ ದೂರವಾದ ವಿಷಯಗಳನ್ನು ನುಡಿದು ಸಮಾಜದಲ್ಲಿ ಸೌಹಾರ್ದತೆಯಲ್ಲಿ ಜೀವಿಸಲು ಧಕ್ಕೆ ಉಂಟುಮಾಡಿದ್ದಾರೆ. ಮಾತ್ರವಲ್ಲದೆ ದೋಂಬಿ ನಡೆಸಲು ಪ್ರಚೋದನೆ ನೀಡಿರುತ್ತಾರೆ.
ಹಿಂದು ಹಾಗೂ ಕ್ರೈಸ್ತ ಧರ್ಮಗಳ ನಡುವೆ ವೈರತ್ವ, ದ್ವೇಷ, ವೈಮನಸ್ಸು ಭಾವನೆಗಳು ಉಂಟುಮಾಡಲು ಉತ್ತೇಜನ ನೀಡಿರುತ್ತಾರೆ. ಸಾರ್ವಜನಿಕ ನೆಮ್ಮದಿ ಕದಡಿರುತ್ತಾರೆ. ಕ್ರೈಸ್ತ ಭಾಂಧವರಲ್ಲಿ ಭಯ ಮತ್ತು ಗಾಬರಿ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕ್ರೈಸ್ತ ಸಂಸ್ಥೆಯಲ್ಲಿ ಕಲಿತವರು ಈಗ ಕ್ರೈಸ್ತರ ವಿರುದ್ಧ ಮಾತನಾಡಿ ಜನರ ಮನಸನ್ನು ಕೆಡಿಸುತ್ತಿದ್ದಾರೆ. ದ್ವೇಷ ಪೂರಿತ ಭಾಷಣದಿಂದ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವ ಮತ್ತು ಬೆದರಿಸುವ ಸಮಸ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ತ್ವರಿತ ಕ್ರಮ ಕೈಗೊಳ್ಳ ಬೇಕಾಗಿದೆ. ದ್ವೇಷ ಭಾಷಣಗಳಂತಹ ಚಟುವಟಿಕೆಗಳು ಆಘಾತಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತಿಯ ದಂಡ ಸಂಹಿತೆ, 1860ರಡಿಯಲ್ಲಿ ಡಾ. ಎಂ.ಕೆ.ಪ್ರಸಾದ್ ವಿವಿಧ ಅಪರಾಧಗಳನ್ನು ಮಾಡಿದ್ದಾರೆ ಎಂದು ದೂರಲಾಗಿದೆ.
ಇಂತಹ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ, ಆರೋಪಿಯಾದ ಡಾ. ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳಲು ವಿನಂತಿಸುತ್ತೇವೆ. ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕಾಗಿ ಕೇಳಿಕೋಳುತ್ತೇವೆ. ಅಲ್ಲದೆ ಕೋಮುಗಳ ನಡುವೆ ದ್ವೇಷ ಬಿತ್ತುವ ಈ ವೀಡಿಯೋವನ್ನು ಯುಟ್ಯುಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ಅಳಿಸಕಬೇಕೆಂದು ವಿನಂತಿಸುತ್ತೇವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ದೂರು ನೀಡಿದ ನಿಯೋಗದಲ್ಲಿ ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಜೆ.ಬಿ.ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ ಅವರು ಎಸ್‌ಪಿ ಪ್ರವೀಣ್ ಆಮ್ಟೆ ಅವರಿಗೆ ದೂರು ನೀಡಿದ್ದಾರೆ. ಎಸ್ಪಿ ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ನಿಯೋಗದಲ್ಲಿ ಕ್ಯಾಥೋಲಿಕ್ ಸಭಾ ಪದಾಧಿಕಾರಿಗಳಾದ ನೊರೀನ್ ಪಿಂಟೋ ( ಪ್ರಧಾನ ಕಾರ್ಯದರ್ಶಿ), ಅಲ್ಫೋನ್ಸ್ ಫೆರ್ನಾಂಡಿಸ್ (ಖಜಾಂಚಿ), ವಿನೋದ್ ಪಿಂಟೊ (ಉಪಾಧ್ಯಕ್ಷರು), ಫ್ರಾನ್ಸಿಸ್ ಸೆರಾರಾವ್ ಜಂಟಿ (ಖಜಾಂಚಿ), ಆರ್ಥರ್ ಡಿ’ಸೋಜಾ (ಬಂಟ್ವಾಳ ವಲಯದ ಅಧ್ಯಕ್ಷರು), ಲ್ಯಾನ್ಸಿ ಮಸ್ಕರೇನಸ್ (ಪುತ್ತೂರು ವಲಯದ ಅಧ್ಯಕ್ಷರು), ಕಾಲಿನ್ ಮಿರಾಂದಾ (ಸಿಟಿ ವಲಯದ ಅಧ್ಯಕ್ಷರು), ಸ್ಟ್ಯಾನಿ ಬಂಟ್ವಾಳ್ ( ಮಾಧ್ಯಮ ಸಂಯೋಜಕರು) ಹಾಜರಿದ್ದರು.