ಬೆಳ್ತಂಗಡಿ: ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯ ಪ್ರದೇಶದ ನೇರ್ತನೆ, ಕೋಟಿಹಿತ್ತಿಲು,ಮುಂಡ್ರುಪಾಡಿ,ಇಕ್ಕೆಲ ಮೊದಲಾದ ಕಡೆ ಕಂಡುಬಂದಿದ್ದ ಬೆಂಕಿ ಪಿಲತಡ್ಕ, ಕೊಂಬಿನಡ್ಕ ಪರಿಸರದ ಕಾಡಿಗೂ ಹಬ್ಬಿದ್ದು ಇದನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ನಡೆಸುತ್ತಿದ್ದಾರೆ.
ಈಗಾಗಲೇ ಸುಮಾರು 50ಕ್ಕಿಂತ ಅಧಿಕ ಎಕರೆ ಪ್ರದೇಶದಲ್ಲಿ ತರಗೆಲೆ, ಒಣಹುಲ್ಲು,ಒಣಮರಗಳು ಬೆಂಕಿಗೆ ಆಹುತಿಯಾಗಿದ್ದು ಬೆಂಕಿ ಅಲ್ಲಲ್ಲಿ ಇನ್ನಷ್ಟು ಹರಡುತ್ತಿದ್ದು ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಕಳೆದ ಮೂರು ದಿನಗಳಿಂದ ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆ ನಡೆಯುತ್ತಿದೆಯಾದರೂ ಬೆಂಕಿ ಸಂಪೂರ್ಣ ಹತೋಟಿಗೆ ಬರುತ್ತಿಲ್ಲ. ಒಂದೆಡೆ ಬೆಂಕಿ ಆರಿಸುವಾಗ,ಇನ್ನೊಂದೆಡೆ ಬೆಂಕಿ ಕಂಡುಬರುತ್ತಿದ್ದು ಕಾರ್ಯಾಚರಣೆ ಜಟಿಲಗೊಳ್ಳುತ್ತಿದೆ. ಉರಿಬಿಸಿಲು,ವಿಪರೀತ ಸೆಕೆ, ಬೆಂಕಿಯ ಪ್ರಖರತೆಯ ಮಧ್ಯೆ, ಸರಿಯಾದ ನೀರು, ಆಹಾರ ಇಲ್ಲದೆ ಕಾರ್ಯಾಚರಣೆ ಸಾಗಿದೆ.
ಮಂಗಳೂರು ಎಸಿಎಫ್ ಶ್ರೀಧರ್ ಪಿ, ಬೆಳ್ತಂಗಡಿ ಆರ್ ಎಫ್ ಒ ತ್ಯಾಗರಾಜ್ ಕಾರ್ಯಾಚರಣೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿ ಆರ್ ಎಫ್ ಒ ಹರಿಪ್ರಸಾದ್,ಗಸ್ತು ಅರಣ್ಯ ಪಾಲಕ ಶರತ್ ಶೆಟ್ಟಿ, ಅರಣ್ಯ ವೀಕ್ಷಕರಾದ ಸದಾನಂದ, ಉಮೇಶ್ ನಾಯ್ಕ್ , ಮುಂಡಾಜೆ ಗ್ರಾಮ ಸದಸ್ಯ ಜಗದೀಶ್ ನಾಯ್ಕ್, ಪರಿಸರ ಪ್ರೇಮಿ ಸಚಿನ್ ಭಿಡೆ ಇವರ ಜತೆ ಸ್ಥಳೀಯರಾದ ಕೃಷ್ಣಪ್ಪ ಕುಳೆಂಜಿರೋಡಿ ಆನಂದ, ರಾಮಣ್ಣ, ಗಣೇಶ, ರಂಜಿತ್, ಅಜಯ್, ರಾಜೇಶ್, ಉಮೇಶ್, ಅವಿನಾಶ್ ಸೇರಿದಂತೆ 20ಕ್ಕೂ ಅಧಿಕ ಮಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೊಂಬಿನಡ್ಕ ಶಾಲೆ ಬಳಿ ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳ ಪರಿಣಾಮ ಪರಿಸರದಲ್ಲಿ ಉಂಟಾಗಿದ್ದ ಬೆಂಕಿಯನ್ನು ಇದೇ ತಂಡ ನಂದಿಸಿದೆ.ಬೆಳಾಲು ಪರಿಸರದ ಅರಣ್ಯದಲ್ಲಿ ಕಂಡುಬಂದಿದ್ದ ಬೆಂಕಿ ಹತೋಟಿಗೆ ಬಂದಿದೆ ಎನ್ನಲಾಗಿದೆ.
ದೈವಕ್ಕೆ ಮೊರೆ:
ಕಿಡಿಗೇಡಿಗಳ ಪುಂಡಾಟಿಕೆಯಿಂದ ಈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ಮುಂಡಾಜೆಯ ಕಾಪುವಿನಲ್ಲಿರುವ ಶ್ರೀ ಉಳ್ಳಾಲ್ತಿ ದೈವಕ್ಕೆ ಹರಕೆ ಹೊತ್ತಿರುವ ಕುರಿತು ಸ್ಥಳೀಯವಾಗಿ ಕಾರ್ಯಾಚರಣೆ ನಡೆಸುತ್ತಿರುವ ತಂಡದ ಸದಸ್ಯರು ತಿಳಿಸಿದ್ದಾರೆ. ಒಂದೆಡೆ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದ್ದರೆ ಇನ್ನೊಂದೆಡೆ ವಿಕ್ಷಿಪ್ತ ಮನಸ್ಸಿನ ಕೆಲವರು ಬೆಂಕಿಗೆ ಕಾರಣವಾಗುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.