ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜೆ. ಆರ್. ಲೋಬೊ ಅವರಿಗೆ ಟಿಕೇಟ್ ಖಚಿತವಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಐವನ್ ಡಿಸೋಜ, ಬಿಲ್ಲವ ಮುಖಂಡ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಕೈ ಟಿಕೇಟ್ ಪಡೆಯಲು ತೀವ್ರ ಸ್ಪರ್ಧೆ ಒಡ್ಡಿದ್ದರು. ಅಲ್ಲದೇ ಒಂದು ಹಂತದಲ್ಲಿ ಆರ್. ಪದ್ಮರಾಜ್ ಅವರಿಗೆ ಕಾಂಗ್ರೆಸ್ ಟಿಕೇಟ್ ಖಾತ್ರಿಯಾಗಿದೆ ಎಂಬ ಸುದ್ದಿ ಹಬ್ಬಿತ್ತು, ಇದಕ್ಕೆ ಪೂರಕವೆಂಬಂತೆ ಪದ್ಮರಾಜ್ ದೆಹಲಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆದಿತ್ತು. ಅಂತಿಮವಾಗಿ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಲೋಬೊ ಅವರಿಗೆ ಟಿಕೇಟ್ ನೀಡಿದೆ. ಪ್ರಸ್ತುತ ಲೋಬೊ ಅವರಿಗೆ ಟಿಕೇಟ್ ಕನ್ಫರ್ಮ್ ಎಂಬ ಸುದ್ದಿ ಬಲ್ಲ ಮೂಲಗಳಿಂದ ದೊರೆತಿದೆ.
ಆದರೆ ದಕ್ಷಿಣ ಕ್ಷೇತ್ರ ಟಿಕೇಟ್ ವಿಚಾರದಲ್ಲಿ ಜಿದ್ದಾಜಿದ್ದಿನ ಹೋರಾಟದ ಕಣವಾಗಿದ್ದು, ಮೂವರು ಅಭ್ಯರ್ಥಿಗಳು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಐವನ್ ಡಿಸೋಜ ತುಸು ಹಿಂದಿದ್ದರೂ ಪದ್ಮರಾಜ್ ಮತ್ತು ಲೋಬೋ ನಡುವೆ ಟೈಟ್ ಫೈಟ್ ಇದೆ. ಹೀಗಾಗಿ ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆಯಾಗಿ ಕೊನೇ ಕ್ಷಣದಲ್ಲಿ ಮತ್ತೊಮ್ಮೆ ಪದ್ಮರಾಜ್ ಕೈ ಮೇಲಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.