ಮಂಗಳೂರು: ಕರಾವಳಿ ಭಾಗದಲ್ಲಿ ಉರಿ ಸೆಕೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರೀಕ್ಷಿತ ಮಳೆ ಇನ್ನೂ ಸುರಿಯದೆ ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಸೆಕೆ ಮುಂದುವರಿದಿತ್ತು. ದಿನವಿಡೀ ಬಿಸಿಲು, ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ 35 ಡಿ.ಸೆ. ಗರಿಷ್ಠ ತಾಪಮಾನ ಮತ್ತು 26 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ ತಲಾ 1 ಡಿ.ಸೆ. ಹೆಚ್ಚು ಇತ್ತು.
ಸಾಮಾನ್ಯವಾಗಿ ಎಪ್ರಿಲ್‌ನಲ್ಲಿ ಬೆಳಗ್ಗೆ ವೇಳೆ ಪೂರ್ವದಿಕ್ಕಿನಿಂದ ಮತ್ತು ಸಂಜೆ ವೇಳೆ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತದೆ. ಬೆಳಗ್ಗೆ ಬೀಸುವ ಗಾಳಿಯಲ್ಲಿ ಬಿಸಿಯ ಅಂಶ ಜಾಸ್ತಿ ಇರುತ್ತದೆ. ಆದರೆ ಸದ್ಯ ಅರಬಿ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿರುವ ಪರಿಣಾಮ ಉತ್ತರದಿಂದ ಗಾಳಿ ಬೀಸುತ್ತಿದೆ. ಈ ಗಾಳಿ ಉಷ್ಣ ಅಲೆಗಳನ್ನು ತರುತ್ತಿದೆ. ಕರಾವಳಿ ಭಾಗದಲ್ಲಿ ಸಮುದ್ರ ಇರುವ ಕಾರಣ ವಾತಾವರಣದಲ್ಲಿ ತೇವಾಂಶ ಜಾಸ್ತಿ ಇರುತ್ತದೆ. ಗರಿಷ್ಠ ಉಷ್ಣಾಂಶ ಮತ್ತು ತೇವಾಂಶ ಒಟ್ಟಿಗೆ ಸೇರಿ “ಹೀಟ್ ಇಂಡೆಕ್ಸ್ ‘ ಉಂಟಾಗುತ್ತದೆ. ಇದು ಬೇಸಗೆ ಬೇಗೆ ಮತ್ತಷ್ಟು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಬಿಸಿ ಗಾಳಿ ಮುನ್ನೆಚ್ಚರಿಕೆ ಇಲ್ಲ. ಆದರೂ ಸದ್ಯ 37-38 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಕೆಲವು ದಿನ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ಇರುತ್ತಿದೆ. ಎಪ್ರಿಲ್ ತಿಂಗಳಿನಲ್ಲಿ ಇದು ಸಾಮಾನ್ಯ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.