ಮಂಗಳೂರು: ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗವು 17ನೇ ಏಪ್ರಿಲ್ 2023ರಂದು ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ನಡೆಸಿದ ‘ಡಿಂಡಿಮ 2023’ ಎಂಬ ಒಂದು ದಿನದ ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಖ್ಯಾತ ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‍ಬೈಲ್ ಉದ್ಘಾಟಿಸಿದರು.
ಕನ್ನಡ ಚಲನಚಿತ್ರರಂಗದಲ್ಲಿ ಕನ್ನಡ ಭಾಷೆಯನ್ನು ಹಾಸ್ಯಕ್ಕಾಗಿ ಬಳಸುತ್ತಿದ್ದ ರೀತಿ ಮತ್ತು ಇತ್ತೀಚೆಗೆ ಅವರ ನಿಲುವನ್ನು ಬದಲಿಸಿ ನಮ್ಮ ಕನ್ನಡವನ್ನು ವಿಶ್ವಾದ್ಯಂತ ತಲೆಯೆತ್ತಿ ನೋಡುವಂತೆ ಮಾಡಿರುವ ನಮ್ಮ ಕಲಾವಿದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಜೊತೆ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ತುಳು-ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾದ ದೀಪಕ್ ರೈ ಪಾಣಾಜೆ ಮಾತನಾಡಿ ಪ್ರತಿಭೆಗಳಿಗೆ ಸರಿಯಾದ ಅವಕಾಶ ಸಿಗಬೇಕು ಎಂದರು. ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಈ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸುಪ್ತ ಪ್ರತಿಭೆ ಹೊರಹೊಮ್ಮಿಸಲು ಸೂಕ್ತ ವೇದಿಕೆ ಕಲ್ಪಿಸಿದಂತಾಗಿದೆ ಎಂದರು.
ಅಲ್ಲದೆ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಎಲ್ಲರ ಮುಂದೆ ಸರಳವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.ರವರು ಮಾತನಾಡಿ, ಎಲ್ಲರಲ್ಲೂ ವಿಧವಿಧವಾದ ಪ್ರತಿಭೆ ಇದ್ದೇ ಇರುತ್ತದೆ ಆದರೆ ಅದನ್ನು ಅನಾವರಣಗೊಳಿಸಲು ಸರಿಯಾದ ವೇದಿಕೆ ಸಿಗಬೇಕು ಎಂದರು.
ಕಾರ್ಯಕ್ರಮ ಸಂಯೋಜಕರಾದ ಡಾ. ಸುಧಾಕುಮಾರಿ, ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್, ಸಹಪ್ರಾಧ್ಯಾಪಕರಾದ ಡಾ. ವಿಶ್ವನಾಥ ಬದಿಕಾನ, ವಿದ್ಯಾರ್ಥಿ ಸಂಯೋಜಕರಾದ ಕಶ್ಯಪ್ ಪಿ.ಆರ್., ಆರನ್ ಆಲ್ಬುಕರ್ಕ್ ಹಾಗೂ ರೇಶ್ಮಾ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣ್ಯರು ನಗಾರಿ ಬಾರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳನ್ನು ಆಯೋಜಿಸಿದ್ದು, ಅದರಲ್ಲಿ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆಗಳು ಮತ್ತು ಯಕ್ಷಗಾನ ಮುಖವರ್ಣಿಕೆ ತಯಾರಿ ಸ್ಪರ್ಧೆಗಳು ಪ್ರಮುಖವಾಗಿದ್ದವು. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ 17 ಕಾಲೇಜುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಉಡುಪಿಯ ಪೂರ್ಣಪ್ರಜ್ನ ಸಂಧ್ಯಾ ಕಾಲೇಜು ಪ್ರಥಮ ಸ್ಥಾನ ಮತ್ತು ಮೂಡಬಿದಿರೆಯ ಶ್ರೀ ಧವಳ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು. ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಧಾ ಕುಮಾರಿ ಸ್ವಾಗತಿಸಿದರು. ಡಾ. ಮಹಾಲಿಂಗ ಭಟ್ ವಂದಿಸಿದರು.