ಉಜಿರೆ: ದೋಟಿ ಕೊಂಡೊಯ್ಯುತ್ತಿದ್ದ ವೇಳೆ ಅದು ಆಕಸ್ಮಿಕವಾಗಿ ವಿದ್ಯುತ್ ಲೈನ್ ಗೆ ಸಂಪರ್ಕಿಸಿ ಮೂವರು ಮಕ್ಕಳು ಗಾಯಗೊಂಡ ಘಟನೆ ಶನಿವಾರ ಚಾರ್ಮಾಡಿಯಲ್ಲಿ ನಡೆದಿದೆ.
ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ಗೆ ವಿದ್ಯುತ್ ಒದಗಿಸುವ ಮತ್ತು ಅಗತ್ಯ ಸಂದರ್ಭ ಅದರಲ್ಲೆ ರಿಟರ್ನ್ ಲೈನ್ ಇರುವ ಖಾಸಗಿ ಕಂಪೆನಿ ಒಂದರ ಮುಖ್ಯ ಲೈನ್ ಚಾರ್ಮಾಡಿಯಲ್ಲಿ ಹೆದ್ದಾರಿ ಬದಿ ಹಾದು ಹೋಗುತ್ತದೆ.
ಈ ಲೈನ್ ನ ಪಕ್ಕದಲ್ಲಿ ಚಾರ್ಮಾಡಿಯ ಇಮ್ತಿಯಾಜ್ ಅವರ ಮಕ್ಕಳಾದ ಮಹಮ್ಮದ್ ಆಲಿ(16),ಮಹಮ್ಮದ್ ಇನಾಜ್(8)ಹಾಗೂ ಹನೀಫ್ ಅವರ ಪುತ್ರ ಅಯ್ಯಾನ್( 6) ಎಂಬ ಮೂವರು ಮಕ್ಕಳು ಡೋಟಿ ಹಿಡಿದುಕೊಂಡು ಹೋಗುತ್ತಿದ್ದಾಗ ಅದು ವಿದ್ಯುತ್ ಲೈನ್ ನ್ನು ಸ್ಪರ್ಶಿಸಿದೆ.ಇದರಿಂದ ಮಕ್ಕಳಿಗೆ ವಿದ್ಯುತ್ ಶಾಕ್ ಹೊಡೆದು ಬಿದ್ದಿದ್ದಾರೆ.
ಸ್ಥಳೀಯರು ಕೂಡಲೇ ಮಕ್ಕಳನ್ನು ಕಕ್ಕಿಂಜೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಸುಟ್ಟ ಗಾಯಗಳಿಗೆ ಒಳಗಾಗಿರುವ ಮಕ್ಕಳು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿದ್ಯುತ್ ಪಕ್ಕವೇ ಎಚ್ ಟಿ ವಿದ್ಯುತ್ ಲೈನ್ ಇದ್ದು ಘಟನೆ ನಡೆದ ಸಂದರ್ಭ ಲೋಡ್ ಶೆಡ್ಡಿಂಗ್ ಇದ್ದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ.ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.