News Karnataka Kannada
Saturday, April 20 2024
Cricket
ವಿಶೇಷ

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 51ನೇ ವರ್ಷದ ಸಾಮೂಹಿಕ ಉಚಿತ ವಿವಾಹ

51st anniversary mass free marriage at Amritavarshini Auditorium in Dharmasthala
Photo Credit : By Author

ಬೆಳ್ತಂಗಡಿ: ಮದುವೆಗಳಲ್ಲಿ ಆಗುವ ಅನಪೇಕ್ಷಿತ ವೆಚ್ಚ, ಅದ್ದೂರಿತನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 50 ವರ್ಷಗಳ ಹಿಂದೆ ಪ್ರಾರಂಭಿಸಲಾದ ಸಾಮೂಹಿಕ‌ ಉಚಿತ ವಿವಾಹವು ಸಮಾಜದಲ್ಲಿ ಅನೇಕ‌ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗೋಧೂಳಿ ಲಗ್ನದಲ್ಲಿ ನಡೆದ 51 ನೇ ವರ್ಷದ ಸಾಮೂಹಿಕ ಉಚಿತ ವಿವಾಹದಲ್ಲಿ 201ಜೋಡಿ ವಧುವರರನ್ನು ಆಶೀರ್ವದಿಸಿದರು.

ಮನೆಗೆ ಬಂದ ವಧುವನ್ನು ಮನೆಯವರು ಗೃಹಿಣಿಯಾಗಿ, ಭಾಗ್ಯಲಕ್ಷ್ಮಿಯಾಗಿ ಕಾಣಬೇಕು. ಆಕೆ ಜೀತದಾಳುವಲ್ಲ ಕೆಲಸದವಳಲ್ಲ ಬದಲಾಗಿ ಆಕೆ ಮನೆಬೆಳಗುವ ಸೊಸೆಯಾಗಿದ್ದಾಳೆ, ಅವಿಭಾಜ್ಯ ಅಂಗವಾಗಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಹೊಸ ಮನೆಗೆ ಕಾಲಿಟ್ಟವಳು ಸಹನೆಯಿಂದ, ಹೊಂದಿಕೊಂಡು ಹೋಗುತ್ತಾ ಮನೆ ಬೆಳಗಬೇಕು. ವಿಚ್ಛೇದನಕ್ಕೆ ಯಾವತ್ತೂ ಅವಕಾಶ ನೀಡಬಾರದು. ಪ್ರೀತಿ, ವಿಶ್ವಾಸದಿಂದ ಕಷ್ಟಸುಖಗಳನ್ನು ಸಮಾನದೃಷ್ಟಿಯಿಂದ ಸ್ವೀಕರಿಸಿ ಎರಡು ಮಕ್ಕಳನ್ನು ಪಡೆದು ಸುಖ ಜೀವನ ನಡೆಸಿ ಎಂದು ಹೆಗ್ಗಡೆ ಹರಸಿದರು.

ಇಲ್ಲಿ ನಡೆಯುವ ವಿವಾಹವನ್ನು ಮಾದರಿ ಕಾರ್ಯಕ್ರಮವೆಂದು ಪರಿಗಣಿಸಿ ಅನೇಕ ದೇವಸ್ಥಾನ, ಮಠ ಹಾಗೂ ಸಂಘ ಸಂಸ್ಥೆಗಳು ನಡೆಸುತ್ತಿರುವುದು ಸಂತಸ ತಂದಿದೆ. ಮದುವೆಯ ವೈಭವೀಕರಣಕ್ಕಾಗಿ ಚಲನಚಿತ್ರರಂಗದ ಕಲಾವಿದರನ್ನು ಆಹ್ವಾನಿಸಲಾಗಿದೆ. ಇಂದು ವಧು ವರರೇ ಹೀರೋ-ಹಿರೋಯಿನ್‌ಗಳು ಎಂದು ಹೆಗ್ಗಡೆ ಶ್ಲಾಘಿಸಿದರು.

ಅತಿಥಿಯಾಗಿದ್ದ ಕನ್ನಡ ಚಲನಚಿತ್ರರಂಗದ ಚಾಲೆಂಜಿಗ್ ಸ್ಟಾರ್ ತೂಗುದೀಪ ದರ್ಶನ ಅವರು, ಹೊಸ ಜೀವನಕ್ಕೆ ಪ್ರವೇಶಿಸುವ ದಂಪತಿಗಳಿಗೆ ಶುಭಾಶಯ ಕೋರುತ್ತಾ ಮನೆಗಳಲ್ಲಿ ಸಮಸ್ಯೆಗಳಿಗೆ ಆಸ್ಪದ ನೀಡದೆ ಜೀವನ ನಡೆಸಬೇಕು. ಇಂದು ವಧುವರರ ತಂದೆ-ತಾಯಂದಿರಿಗೆ ಖುಷಿಕೊಡುವ ದಿನವಾಗಿದೆ ಎಂದ ಅವರು ತನ್ನ ಮದುವೆಯೂ ಶ್ರೀಕ್ಷೇತ್ರದಲ್ಲಿ ಆಗಿರುವುದನ್ನು ನೆನಪಿಸಿಕೊಂಡರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಹೇಮಾವತಿ ವೀ.ಹೆಗ್ಗಡೆ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ವಂದಿಸಿದರು. ದಿವ್ಯಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ದಿಬ್ಬಣದ ಬಗ್ಗೆ ಸುನಿಲ್ ಕಲ್ಕೊಪ್ಪ ಆಕರ್ಷಕವಾಗಿ ನಿರೂಪಿಸಿದರು.

201 ಜೋಡಿಗಳ ದಿಬ್ಬಣ ಮೆರವಣಿಗೆ ದೇವಸ್ಥಾನದಿಂದ ಸಭಾಭವನದ ತನಕ ನಡೆಯಿತು. ಮಂಗಲ ವಾದ್ಯ, ವೇದ ಘೋಷಗಳೊಂದಿಗೆ ಹಾರವಿನಿಮಯ, ಮಾಂಗಲ್ಯಧಾರಣೆ, ಆರತಿ, ಮಂತ್ರಾಕ್ಷತೆ ನಡೆದವು. ಆಯಾ ಜಾತಿ, ಸಂಪ್ರದಾಯದಂತೆ ಮದುವೆ ಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಾಂಪತ್ಯ ದೀಕ್ಷೆ ನೀಡಲಾಯಿತು.

ಹೆಗ್ಗಡೆಯವರು ಹಾಗೂ ದರ್ಶನ್ ಮಾಂಗಲ್ಯ ವಿತರಿಸಿದರು. ಶಾಲು,ಪಂಚೆ,ಸೀರೆ, ಪಾತ್ರೆಗಳ ಉಡುಗೋರೆ ನೀಡಲಾಯಿತು.

ಹಲವಾರು ವರ್ಷಗಳ ಹಿಂದೆ ನಮ್ಮ ಸಂಸಾರದ ಕಷ್ಟಕರವಾದ ದಿನಗಳಲ್ಲಿ ನಾನು ಬಾಲಕನಿದ್ದಾಗ ನನ್ನ ಅಮ್ಮ, ಅಕ್ಕ,ತಮ್ಮನೊಂದಿಗೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ಹೆಗ್ಗಡೆಯವರನ್ನು ಭೇಟಿ ಮಾಡಿದ್ದೆವು. ಅಂದು ನನ್ನ ಅಮ್ಮ ವೈರಾಗ್ಯದ ಮಾತುಗಳನ್ನಾಡಿದ್ದರು. ಅಂತಹ ಸಂದರ್ಭದಲ್ಲಿ ಇಬ್ಬರು ಗಂಡು ಮಕ್ಕಳಿರುವಾಗ ಯಾವ ಚಿಂತೆಯೂ ಮಾಡಬಾರದು. ಧೈರ್ಯದಿಂದಿರಬೇಕು ಎಂಬ ಭರವಸೆಯ ಮಾತುಗಳನ್ನಾಡಿದ್ದರು. ಹೆಗ್ಗಡೆಯವರ ಅಂದಿನ ಭರವಸೆಯ ಮಾತೇ ನನ್ನನ್ನು ಇಂದು ನಟನನ್ನಾಗಿ ಮಾಡಿದೆ – ದರ್ಶನ್

ನಿಶ್ಚಿತಾರ್ಥ, ಮೆಹೆಂದಿ ಸಂಸರ್ಭದಲ್ಲಿ ಅತಿಯಾದ ಖರ್ಚುಗಳನ್ನು‌ ಮಾಡಬೇಡಿ ಎಂದು ಶ್ರೀಕ್ಷೇತ್ರ ಧ.ಗ್ರಾ.ಯೋ.ಯ ಕಾರ್ಯಕರ್ತರು ಮನೆಮನೆಗೆ ತೆರಳಿ‌ ಕೈ ಮುಗಿದು ಕೇಳಿಕೊಳ್ಳುತ್ತಿರುವ ಪರಿಣಾಮ ಅನೇಕ ಬದಲಾವಣೆಗಳಾಗಿವೆ– ಡಾ.ಹೆಗ್ಗಡೆ
ದರ್ಶನ್ ಓರ್ವ ಮಾನವೀಯ ಗುಣವುಳ್ಳ ನಟ. ಅವರ ಪಕ್ಷಿ,ಪ್ರಾಣಿಗಳ ಮೇಲಣ ಪ್ರೀತಿ ನಾನು ಅರಿತುಕೊಂಡಿದ್ದೇನೆ. ಅವರ ಆಗಮನದಿಂದ ಮದುವೆಯ ಪ್ರಾಶಸ್ತ್ಯ ಹೆಚ್ಚಿದೆ- ಡಾ.ಹೆಗ್ಗಡೆ.

ವಧೂ ವರರ ಪ್ರಮಾಣವಚನ ಹೀಗಿತ್ತು.
ಶ್ರೀಕ್ಷೇತ್ರದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧೂವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನುದ್ದಕ್ಕೂ ಧರ್ಮ, ಅರ್ಥ, ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಯಾವುದೇ ದುರಾಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ.

ಸಾಮೂಹಿಕ ವಿವಾಹದಲ್ಲಿ
ಬೆಳ್ತಂಗಡಿ ತಾಲೂಕಿನಿಂದ 5,ಮಂಗಳೂರು 5,ಪುತ್ತೂರು6,ಉಡುಪಿ ಜಿಲ್ಲೆಯಿಂದ24,ಚಿಕ್ಕ ಮಗಳೂರು 14, ಶಿವಮೊಗ್ಗ 16, ಹಾಸನ11, ಬೆಂಗಳೂರು 10, ಮೈಸೂರು 13, ಹಾವೇರಿ6, ಕೊಡಗು7,ದಾವಣಗೆರೆ 9,ಧಾರವಾಡ 7, ಉತ್ತರಕನ್ನಡ 17, ಚಿತ್ರದುರ್ಗ3, ಮಂಡ್ಯ9,ರಾಮನಗರ 5, ಚಾಮರಾಜನಗರ 7, ಬಳ್ಳಾರಿ 3, ಬಾಗಲಕೋಟೆ 3, ತುಮಕೂರು10, ಬೆಳಗಾವಿ 3, ಗದಗ3, ಕೋಲಾರ ಜಿಲ್ಲೆಯ 1ಜೋಡಿ ಹಾಗೂ ಕೇರಳ ರಾಜ್ಯ ದ 1ಹಾಗೂ ಆಂಧ್ರ ಪ್ರದೇಶದ 3ಜೋಡಿ ಸಹಿತ 201ಜೋಡಿ ವಿವಾಹ ನೆರವೇರಿತು.

ಇವರಲ್ಲಿ ಕೂಲಿ 57, ಬೇಸಾಯ 13, ವ್ಯಾಪಾರ13,ಚಾಲಕ35,ಖಾಸಗಿ ಉದ್ಯೋಗಿ 75,ಸರಕಾರಿ ಉದ್ಯೋಗಿ 1, ಮರದ ಕೆಲಸ1, ಹಾಗೂ ಮೀನುಗಾರಿಕೆ ವೃತ್ತಿಯ ಇಬ್ಬರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು