News Karnataka Kannada
Wednesday, April 24 2024
Cricket
ಮಂಗಳೂರು

ಬೆಳ್ತಂಗಡಿ: ಜಾತಿ-ಧರ್ಮ ನೋಡದೆ ಜನಸೇವಕನಾಗಿ ಕೆಲಸ ಮಾಡಿದ್ದೇನೆ – ಹರೀಶ್ ಪೂಂಜ

There is no guarantee for the Congress party which is distributing guarantee cards
Photo Credit : News Kannada

ಬೆಳ್ತಂಗಡಿ: ‘ಹರೀಶ್ ಪೂಂಜ ಶಾಸಕರಾಗಿ ಕಳೆದ 5 ವರ್ಷಗಳ ಅವಧಿಯಲ್ಲಿ ಬಡವರ ಕಣ್ಣೀರು ಒರೆಸುವ ಜತೆ ಎಲ್ಲಾ ಧರ್ಮದವರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ತಾಲ್ಲೂಕಿಗೆ ರೂ. 3500 ಕೋಟಿ ಅನುದಾನ ತಂದು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಬಾರಿ 50 ಸಾವಿರಕ್ಕಿಂತ ಅಧಿಕ ಮತಗಳಿಂದ ಅವರು ಜಯಶಾಲಿಯಾಗುವುದು ನಿಶ್ಚಿತ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಬಳಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರವಾಗಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಹರೀಶ್ ಪೂಂಜ ಶಾಸಕರಾದ ಮೇಲೆ ಕಳೆದ 60 ವರ್ಷಗಳಲ್ಲಿ ಆಗದ ಕೆಲಸ ಬೆಳ್ತಂಗಡಿಯಲ್ಲಾಗಿದೆ. ಸುಂದರವಾದ ಪ್ರವಾಸಿ ಬಂಗಲೆ ನಿರ್ಮಾಣವಾಗಿದೆ. ಮುಂದೆ ಮಾದರಿ ಬಸ್ ನಿಲ್ದಾಣ ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಚತುಷ್ಪತ ರಸ್ತೆ ನಿರ್ಮಾಣವಾಗಲಿದೆ. ಈ ಬಾರಿ ಬಿಜೆಪಿ ಸರ್ಕಾರ ಬರಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗಾಗಿ 10 ಸಾವಿರ ಮನೆಯನ್ನು ನಿರ್ಮಾಣ ಮಾಡುತ್ತೇವೆ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯದಲ್ಲಿ 120 ಕ್ಕಿಂತ ಅಧಿಕ ಸ್ಥಾನಗಳು ಬಿಜೆಪಿಗೆ ಬರಲಿದ್ದು, ಬಹುಮತದ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ಗ್ಯಾರಂಟಿ ಕಾರ್ಡು ಹಂಚುತ್ತಿರುವ ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತು ಸೋಮಣ್ಣ ಗೆಲುವು ನಿಶ್ಚಿತ.

ಇಂದು ನರೇಂದ್ರ ಮೋದಿಯ ಆಡಳಿತದಿಂದಾಗಿ ಜಗತ್ತು ಭಾರತವನ್ನು ಕೊಂಡಾಡುತ್ತಿದೆ. ಗರೀಬಿ ಹಠಾವೋ, ಕಿಸಾನ್ ಸಮ್ಮಾನ್, ಶೌಚಾಲಯಕ್ಕೆ ಆಧ್ಯತೆ, ಕೋವಿಡ್‍ನಿಂದ ರಕ್ಷಣೆ ಮಾಡಿದ್ದು ನರೇಂದ್ರ ಮೋದಿಯವರು. ದೇಶದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲೆಡೆ ಬಿಜೆಪಿ ಜಯಗಳಿಸುವ ಅಗತ್ಯವಿದೆ ಎಂದರು.

ಪಕ್ಷದ ಅಭ್ಯರ್ಥಿ, ಶಾಸಕ ಹರೀಶ್ ಪೂಂಜ ಮಾತನಾಡಿ, ‘ತಾಲ್ಲೂಕಿಗೆ ನೆರೆ, ಕೊರೊನಾ ಬಾಧಿಸಿದ ಸಂದರ್ಭದಲ್ಲಿ ಜಾತಿ-ಧರ್ಮ ನೋಡದೆ ಜನಸೇವಕನಾಗಿ ಕೆಲಸ ಮಾಡಿದ್ದೇನೆ. ತಾಲ್ಲೂಕು, ಜಿಲ್ಲೆಯ ಹಿಂದೂ ಬಾಂಧವರು ಕಷ್ಟಕ್ಕೆ ಒಳಗಾದಾಗ ರಾತ್ರಿ ಹಗಲು ಎನ್ನದೆ ಕೆಲಸ ಮಾಡಿದ್ದೇನೆ. ಕೋಮು ಗಲಭೆ, ದೊಂಬಿ ಗಲಾಟೆ ಆಗದಂತೆ ಸಾಮರಸ್ಯದಿಂದ ಐದು ವರ್ಷ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, 718 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ಉಜಿರೆ ಬೆಳಾಲು ರಸ್ತೆಯ ನಿನ್ನಿಕಲ್ಲು ಬಳಿ 116 ಎಕ್ರೆ ಭೂ ಪ್ರದೇಶವನ್ನು ಕೈಗಾರಿಕಾ ವಲಯವಾಗಿ ಮಾಡಿ ತಾಲ್ಲೂಕಿನ 2500 ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು.

ಜಿಲ್ಲಾ ಉಪಾಧ್ಯಕ್ಷ, ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ ಮಾತನಾಡಿ, ‘ಸಾಲು ಸಾಲು ಹಗರಣ ಮಾಡಿದ ಕಾಂಗ್ರೆಸ್ ಬಿಜೆಪಿ ಶೇ. 40 ಹಗರಣ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದೆ. ನರೆಂದ್ರ ಮೋದಿ ಬಂದ ಮೇಲೆ ಜಾತಿ, ಕೋಮು, ಕುಟುಂಬ ರಾಜಕಾರಣ ಅಂತ್ಯವಾಗಿದೆ. ಹಾಗಾಗಿ ರಾಷ್ಟ್ರೀಯ ಚಿಂತನೆಗಾಗಿ ಬಿಜೆಪಿಗೆ ಮತ ಚಲಾಯಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ಮಾತನಾಡಿ, ‘ಬೆಳ್ತಂಗಡಿಯಲ್ಲಿ ಹರೀಶ್ ಪೂಂಜರ ಪರ ಪ್ರಚಾರ ಮಾಡಿ ಮತ ಕೇಳಬೇಕಾದ ಅಗತ್ಯವಿಲ್ಲ. ಅವರು ತಾಲ್ಲೂಕಿಗೆ ಮಾಡಿದ ಕೆಲಸ ಕಾರ್ಯಗಳೇ ವಿಶ್ವಾಸದಿಂದ ಮತ ಕೇಳುವಷ್ಟು ಬಿಜೆಪಿ ಬೆಳೆದಿದೆ. ಬೆಳ್ತಂಗಡಿ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ 115 ರಿಂದ 130 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಕ್ಷದ ಮುಖಂಡರುಗಳಾದ ಜಯಾನಂದ ಗೌಡ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಮುಗುಳಿ ನಾರಾಯಣ ರಾವ್, ಜಯಾನಂದ ಗೌಡ, ರಜನಿ ಕುಡ್ವ, ರಾಜೇಶ್ ಪ್ರಭು, ಕಾಮಿಡಿ ಕಿಲಾಡಿಗಳಾದ ಅನೀಶ್ ಅಮೀನ್, ಹಿತೇಶ್ ಕಾಪಿನಡ್ಕ, ವಿವಿಧ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಅಜಿತ್ ಅರಿಗ, ಜಯಾನಂದ ಕಲ್ಲಾಪು, ದಾಮೋದರ ಗೌಡ ಇದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಪ್ರಮುಖ್ ರಾಜೇಶ್ ಪೆರ್ಮುಡ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು