News Kannada
Saturday, February 24 2024
ಮಂಗಳೂರು

ಬೆಳ್ತಂಗಡಿ: ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಾನಿ ಸಂಭವ

Photo Credit : By Author

ಬೆಳ್ತಂಗಡಿ: ತಾಲೂಕಿನಲ್ಲಿ ಶುಕ್ರವಾರ ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಾನಿಗಳು ಸಂಭವಿಸಿವೆ.
ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿ ಗುರುವಾರ ರಾತ್ರಿ ಕುರಿಯಾಳಶೇರಿ ಥಾಮಸ್ ಎಂಬವರ ಮೇ ತಿಂಗಳಲ್ಲಿ ಗೃಹಪ್ರವೇಶವಾಗಿದ್ದ ಮನೆಯ ಮೇಲೆ ಹಿಂಭಾಗದ ಗುಡ್ಡ ಕುಸಿದು ಬಿದ್ದಿದ್ದು, ಮನೆಗೆ ತೀವ್ರ ಹಾನಿ ಸಂಭವಿಸಿದೆ.

ಮನೆಯವರನ್ನು ಅಲ್ಲಿಂದ ಕೂಡಲೇ ಸ್ಥಳಾಂತರಿಸಲಾಗಿದೆ. ಭೂ ಕುಸಿತದ ತೀವ್ರತೆಗೆ ಮನೆಯ ಕಿಟಕಿ ಹಾಗೂ ಗೋಡೆ ಒಡೆದು ಹೋಗಿದ್ದು ಮನೆಯೊಳಗೆ ಬಂಡೆಕಲ್ಲುಗಳು ಮಣ್ಣು ಹಾಗೂ ನೀರು ನುಗ್ಗಿದೆ.

ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೂ ಹಾನಿಯುಂಟಾಗಿದೆ. ಮನೆಯ ಸುತ್ತ ಕಲ್ಲು, ಮಣ್ಣು ಹಾಗೂ ಹೂಳು ತುಂಬಿದ್ದು ಸ್ಥಳೀಯ ಗ್ರಾಮ ಪಂಚಾಯತಿನ ಹಾಗೂ ಧರ್ಮಗುರುಗಳಾದ ಫಾ.ಶಾಜಿ ಅವರ ನೇತೃತ್ವದಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂಡಾಜೆ ಗ್ರಾಮದ ಫಿಲತ್ತಡ್ಕ ಎಂಬಲ್ಲಿ ಗುಡ್ಡ ಕುಸಿತಗೊಂಡು ಶ್ರೀಧರ ಪೂಜಾರಿ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಗುಡ್ಡದ ಮಣ್ಣು ಮನೆಯ ಒಂದು ಭಾಗದಲ್ಲಿ ಕುಸಿದು ಮನೆಯ ಗೋಡೆ ತನಕ ಆವರಿಸಿದೆ. ಗುಡ್ಡ ಇನ್ನಷ್ಟು ಕುಸಿಯುವ ಸಂಭವವಿದ್ದು ಮನೆಯವರು ಪಕ್ಕದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮುಂಡಾಜೆ ಗ್ರಾಮದ ಮಂಜುಶ್ರೀ ನಗರದ ಕುಂಟಾಲಪಲಿಕೆ ಎಂಬಲ್ಲಿ ಆನಂದ ಎಂಬವರ ಮನೆಯ ಒಂದು ಪಾರ್ಶ್ವದ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯವರು ಪಕ್ಕದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಹಾನಿ ಪ್ರದೇಶಗಳಿಗೆ ಮುಂಡಾಜೆ ಗ್ರಾಮಲೆಕ್ಕಿಗ ಪ್ರದೀಪ್, ಪಂಚಾಯತಿ ಅಧ್ಯಕ್ಷ ರಂಜಿನಿ ರವಿ, ಪಿಡಿಒ ಸುಮಾ ಎ.ಎಸ್, ಗ್ರಾಪಂ ಸದಸ್ಯರು, ರೋಟರಿ ಕ್ಲಬ್ ಸದಸ್ಯ ವೆಂಕಟೇಶ್ವರ ಭಟ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನದಿಗಳಲ್ಲಿ ಭಾರಿ ಹರಿವು
ಗುರುವಾರ ಮಧ್ಯಾಹ್ನದ ಬಳಿಕ ವಿಪರೀತ ಮಳೆಯಾದ ಕಾರಣ ನೇತ್ರಾವತಿ, ಮೃತ್ಯುಂಜಯ ನದಿಗಳು ತುಂಬಿ ಹರಿದು ತಗ್ಗು ಪ್ರದೇಶದ ತೋಟಗಳಿಗೆ ನೀರು ನುಗ್ಗಿ ಹಲವೆಡೆ ಆತಂಕದ ವಾತಾವರಣ ಸೃಷ್ಟಿಯಾಯಿತು.ಕಿಂಡಿ ಅಣೆಕಟ್ಟು ಕಿರು ಸೇತುವೆಗಳು ಸಂಪರ್ಕ ಕಳೆದುಕೊಂಡವು. ಆದರೆ ತಡರಾತ್ರಿ ಒಂದು ಗಂಟೆ ಬಳಿಕ ನದಿಗಳ ನೀರು ಇಳಿಕೆಯಾಗಿ ಪರಿಸರದ ಜನರಲ್ಲಿ ನೆಮ್ಮದಿ ಮೂಡಿತು.

ಚಾರ್ಮಾಡಿ ಘಾಟಿ ಪ್ರದೇಶದ ಒಂದೆರಡು ಕಡೆ ಸಣ್ಣಮಟ್ಟದ ಗುಡ್ಡ ಕುಸಿತಗಳು ಸಂಭವಿಸಿದ್ದರು ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೆಸಿಬಿಗಳನ್ನು ದಿನದ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಘಾಟಿ ಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ದಕ ವಿಭಾಗದ ಎ.ಇ.ಇ. ಕೃಷ್ಣಕುಮಾರ್ ತಿಳಿಸಿದ್ದಾರೆ.

ಶಾಸಕರ ಭೇಟಿ
ನೆರಿಯ ಹಾಗೂ ಮುಂಡಾಜೆಯಲ್ಲಿ ಗುಡ್ಡ ಕುಸಿತಗಳು ಉಂಟಾದ ಪ್ರದೇಶದ ಮನೆಗಳಿಗೆ ಶಾಸಕ ಹರೀಶ್ ಪೂಂಜ ಶುಕ್ರವಾರ ಭೇಟಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು