News Karnataka Kannada
Thursday, April 25 2024
Cricket
ಮಂಗಳೂರು

ಸಾಹಿತ್ಯ ಶಿಬಿರಗಳಿಂದ ಸದಭಿರುಚಿಯ ಪ್ರಸರಣ: ಡಾ. ಹೇಮಾವತಿ ವಿ.ಹೆಗ್ಗಡೆ

Dissemination of good taste from literary camps: Dr. Hemavathi V. Heggade
Photo Credit : News Kannada

ಉಜಿರೆ: ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವಂಥ ಶಿಬಿರಗಳು ಯುವಸಮೂಹದಲ್ಲಿ ಸದಭಿರುಚಿ ನೆಲೆಗೊಳಿಸುವುದರೊಂದಿಗೆ ಭಾಷೆ ಮತ್ತು ಸಂಸ್ಕೃತಿಯ ಕುರಿತ ಕಾಳಜಿಯನ್ನು ವ್ಯಾಪಕಗೊಳಿಸುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಹೇಮಾವತಿ ವಿ.ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಕಾಲೇಜಿನ ಕನ್ನಡ ಸಂಘ ಹಾಗೂ ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನ ಸಹಯೋಗದೊಂದಿಗೆ ೨೫ನೇ ಸಾಹಿತ್ಯ ಅಧ್ಯಯನ ಶಿಬಿರದ ರಜತ ಸಂಭ್ರಮದ ಪ್ರಯುಕ್ತ ಆಯೋಜಿತವಾದ ಎರಡು ದಿನಗಳ “ಕಲಾನುಸಂಧಾನ ಶಿಬಿರ”ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಪುಸ್ತಕವನ್ನು ಅರ್ಥೈಸಿಕೊಳ್ಳುವುದಕ್ಕೆ ವಿಮರ್ಶೆ ನೆರವಾಗುತ್ತದೆ. ಚಿಂತಕರು, ವಿಮರ್ಶಕರು ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತಾರೆ. ಇದರೊಂದಿಗೆ ಓದಿನ ಸಾಮರ್ಥ್ಯದ ಸಾಧ್ಯತೆಗಳನ್ನು ವಿಸ್ತರಿಸುವ ಒಳನೋಟಗಳನ್ನೂ ಕಟ್ಟಿಕೊಡುತ್ತಾರೆ. ಸಾಹಿತ್ಯ ಅಧ್ಯಯನದ ಶಿಬಿರಗಳು ಈ ನಿಟ್ಟಿನಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡುತ್ತವೆ ಎಂದರು.

ಸಾಹಿತ್ಯ ಎನ್ನುವುದು ನಮ್ಮ ಭಾವನೆಗಳ ಬೆಳವಣಿಗೆಗೆ ಸಾವಯವ ಇದ್ದಹಾಗೆ. ಕಾವ್ಯ, ಕಥೆ, ಕಾದಂಬರಿಗಳ ವಿಮರ್ಶೆಯು ಸರಿಯಾದ ಅರ್ಥಗಳನ್ನು ಹೊಳೆಸುತ್ತದೆ. ನೀನಾಸಂ ಸಂಸ್ಥೆಯೊಂದಿಗೆ ಎಸ್.ಡಿ.ಎಂ ಕಾಲೇಜು ಆಯೋಜಿಸುವ ಶಿಬಿರವು ವಿದ್ಯಾರ್ಥಿಗಳೊಳಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಜ್ಞೆಯನ್ನು ಮೂಡಿಸಿದೆ. ಈ ಬಗೆಯ ಪ್ರಯತ್ನಗಳು ಮುಂದುವರೆಯಲಿ ಎಂದು ಆಶಿಸಿದರು.

ರಾಮಾಯಣ, ಮಹಾಭಾರತದಂಥಹ ಕಥನಗಳಿಗೆ ಸಮಕಾಲೀನ ಜೀವಂತಿಕೆಯನ್ನು ತಂದುಕೊಟ್ಟವರು ನಾಟಕಕಾರರು ಮತ್ತು ಅವರ ನಾಟಕಗಳನ್ನು ಪ್ರದರ್ಶನದ ಮೂಲಕ ಜನರಿಗೆ ತಲುಪಿಸುವ ಕಲಾವಿದರು.

ಯಕ್ಷಗಾನ, ತಾಳಮದ್ದಲೆ ಕಲಾವಿದರೂ ಈ ಕಥನಗಳ ಜೀವಂತಿಕೆಯನ್ನು ಹೆಚ್ಚಿಸಿದ್ದಾರೆ. ಇವುಗಳ ಕುರಿತು ವಿಸ್ತೃತ ಜ್ಞಾನ ಪಡೆಯುವುದಕ್ಕೆ ಶಿಬಿರಗಳು ನೆರವಾಗುತ್ತವೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಕಾಲೇಜಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಬದ್ಧತೆಯ ಬಗ್ಗೆ ಪ್ರಸ್ತಾಪಿಸಿದರು. ಕಳೆದ ೨೫ ವರ್ಷಗಳಿಂದ ನೀನಾಸಂ ಸಂಸ್ಥೆಯ ಒಡಂಬಡಿಕೆಯೊಂದಿಗೆ  ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಸಾಹಿತ್ಯ, ಸಂಸ್ಕೃತಿ ಕುರಿತು ಮೌಲಿಕ ಚಂತನೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಶಿಬಿರವನ್ನು
ನಡೆಸಿಕೊಂಡು ಬಂದಿದೆ ಎಂದರು.

ತಾಂತ್ರಿಕತೆಯ ಪ್ರಭಾವಳಿಯ ನಡುವೆಯೂ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಮೂಡಿಸುವಲ್ಲಿ ಈ ಶಿಬಿರಗಳ ಪಾತ್ರ ಹಿರಿದು ಎಂದು ಹೇಳಿದರು.

ಎಸ್.ಡಿ.ಎಂ ಕಾಲೇಜಿನ ವಿಶ್ರಾಂತ ಕುಲಸಚಿವರಾದ ಡಾ.ಬಿ.ಪಿ.ಸಂಪತ್ ಕುಮಾರ್ ಅವರು ನೀನಾಸಂ ಸಂಸ್ಥೆಯೊಂದಿಗೆ
ಎಸ್.ಡಿ.ಎಂ ಕಾಲೇಜು ಕಳೆದ ೨೪ ವರ್ಷಗಳಿಂದ ಆಯೋಜಿಸುತ್ತಿರುವ ವಾರ್ಷಿಕ ಅಧ್ಯಯನ ಶಿಬಿರದ ಮೌಲಿಕ ಚಿಂತನೆಯ ವಿಶೇಷತೆಗಳನ್ನು ನೆನಪಿಸಿಕೊಂಡರು.

ಪ್ರತಿವರ್ಷದ ಶಿಬಿರಗಳ ಮೂಲಕ ಕನ್ನಡದ ಮಹತ್ವದ ಲೇಖಕರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ವಿದ್ಯಾರ್ಥಿಗಳು ಸಾಹಿತ್ಯ, ಸಂಸ್ಕೃತಿ ಕುರಿತ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಕಥೆಗಾರರಾದ ವಸುಧೇಂದ್ರ ಉಪಸ್ಥಿತರಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೋ.ಟಿ.ಪಿ.ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬೋಜಮ್ಮ ಕೆ.ಎನ್. ಸ್ವಾಗತಿಸಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ದಿವಾಕರ ಕೆ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು