News Kannada
Monday, December 11 2023
ಮಂಗಳೂರು

ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ: ಪ್ರೊ. ಕೆ. ಫಣಿರಾಜ್

Feeling of alliance is essential for the well-being of the society: Prof. K. Phaniraj
Photo Credit : News Kannada

ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಪ್ರತಿಪಾದಿಸಿದರು. ನಗರದ ಪುರಭವನದಲ್ಲಿ ಗುರುವಾರ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿದ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು ಎಂಬ ತತ್ವದಡಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ್ವೇಷ ಎನ್ನುವುದು ಬಹಳ ಸರಳವಾದ ವಿಷಯ, ಪ್ರೀತಿಯೆಂಬುವುದು ಸರಳವಲ್ಲ. ಅಧಿಕಾರಕ್ಕಾಗಿ, ಹಣಕ್ಕಾಗಿ ವೇಷ ಮಾಡುವುದು ಸುಲಭ, ಅದಕ್ಕೆ ಪ್ರಚೋದನೆ ನೀಡಲು ಹಲವರಿದ್ದಾರೆ. ಅಂತಹ ಸಂದರ್ಭಲ್ಲಿ ಪ್ರೀತಿಸುವ ಗುಣವು ನಿಜವಾದ ಒಂದು ಆಧ್ಯಾತ್ಮವಾಗಿದೆ. ಭಾರತ ಬಹಳ ದೊಡ್ಡ ಕೋಮು ಹಿಂಸೆಯನ್ನು ಅನುಭವಿಸಿದೆ, ಮತೀಯ ದ್ವೇಷದಿಂದ ಒಬ್ಬರನ್ನು ಒಬ್ಬರು ಕೊಂದಿದ್ದಾರೆ, ಅತ್ಯಾಚಾರ ಎಸಗಿದ್ದಾರೆ. ಭಾರತದಲ್ಲಿ ಸಹೋದರತ್ವ ಎನ್ನುವ ಭಾವನೆ ದಿನ ನಿತ್ಯ ಮಾಡುವ ಊಟ, ನಿದ್ದೆಯ, ಉಸಿರಾಡುವ ಗಾಳಿಯ ಹಾಗೇ ದಿನ ನಿತ್ಯದ ಮೌಲ್ಯವಾಗದೆ ಹೋದರೆ ಸಾಮಾಜಿಕ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಕಾನೂನಿನ ಆಸರೆಯಲ್ಲಿ ಸಮಾನತೆಯನ್ನು ರಕ್ಷಿಸಲು ಸಾಧ್ಯವಿಲ್ಲ ಮತ್ತು ಬಹಳ ದಿವಸ ಉಳಿಯುವುದಿಲ್ಲ. ಸಮಾನತೆ, ಭ್ರಾತೃತ್ವ ಬಹಳ ದಿನ ಉಳಿಯಬೇಕಾದರೆ ಸಮಾನ ಸಂಪನ್ಮೂಲ ಹಂಚಿಕೆಯಾಗುವ ಕ್ರಮವಾಗಬೇಕು. ಸ್ನೇಹದ ಭಾವನೆ ಅಂದರೆ ಮೈತ್ರಿಯ ಭಾವವನ್ನು ಕೆಡಿಸುವವರಿಂದ ಸಂಘರ್ಷ ಉಂಟಾಗುತ್ತಿದೆ ಎಂದು ಪ್ರೊ. ಫಣಿರಾಜ್ ಹೇಳಿದರು.

ಸಂವಿಧಾನದ ಮೂಲ ತತ್ವ ಅರಿತುಕೊಳ್ಳಿ: ಎಕ್ಕಾರು

ಹಲವು ಜಾತಿ, ಧರ್ಮ, ಸಂಸ್ಕೃತಿ, ಭಾಷೆ ಹೀಗೆ ಹಲವುಗಳನ್ನು ಒಪ್ಪಿಕೊಂಡು ಬದುಕುವುದೇ ಬಹುತ್ವ, ಈ ವೈವಿಧ್ಯತೆಯನ್ನು ಮತ್ತು ಭಾರತೀಯ ಸಂವಿಧಾನದ ಮೂಲ ತತ್ವಗಳನ್ನು ಅರ್ಥ ಮಾಡಿಕೊಂಡರೆ ನಾವು ಪ್ರೀತಿಯ ಸೆಲೆಯಲ್ಲಿ ಮೊಳಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಜನಪದ ವಿದ್ವಾಂಸ, ನಿವೃತ್ತ ಎನ್‍ಎಸ್‍ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ವಿಷಯ ಮಂಡನೆ ಮಾಡಿ ಮಾತನಾಡಿದ ಅವರು, ಗಾಂಧೀಜಿ ಹೇಳುತ್ತಾರೆ ನಿಜವಾದ ಕ್ರಾಂತಿ ಎಂಬುವುದು ನಮ್ಮ ಅಂತರಂಗದಿಂದ ಆರಂಭವಾಗುತ್ತದೆ ಎಂದು. ನೈಜತೆಯನ್ನು ಅರ್ಥ ಮಾಡಿಕೊಂಡಾಗ ಅಂತರಂಗದ ಕ್ರಾಂತಿಯಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ನಮ್ಮ ಯೋಚನಾ ಕ್ರಮ, ನಮ್ಮ ಮತ್ತು ನಾಡಿನ ಬೆಳವಣಿಗೆ ಮಾತ್ರವಲ್ಲ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತ ಸಂವಿಧಾನದ ಮೂಲ ತಿರುಳುಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕು. ನನಗೆ ಸಮಾನತೆ, ಸ್ವಾತಂತ್ರ್ಯ ಇರುವಾಗ ಇನ್ನೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಇದೆ ಎಂಬುದನ್ನು ಅರಿತುಕೊಂಡು ಪರಸ್ಪರ ಗೌರವದಿಂದ ಬದುಕುವ ಅನಿವಾರ್ಯತೆ ಮತ್ತು ಅಗತ್ಯವಿದೆ. ಸಮಾನತೆಗೆ ತೊಂದರೆ ಆದಾಗ ಮದರ್ ತೆರೆಸಾರಂತಹ ಮಹನೀಯರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಇಂದು ಪ್ರೀತಿಯ ಬೋಧನೆಗಳಿಗಿಂತ ಆಚರಣೆಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಮಾನವೀಯತೆ ಎಂದರೆ ಪ್ರೀತಿಯ ಸೆಲೆ. ಇದರ ಅಗತ್ಯ ಬಹಳಷ್ಟಿದೆ. ಮದರ್ ತೆರೆಸಾ ಅವರು ತನ್ನನ್ನು ತಾನು ಸೇವೆಗಾಗಿ ಸಮರ್ಪಿಸಿಕೊಂಡು ಬದುಕಿದರು. ಹೊಟ್ಟೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರು, ಕುಷ್ಠ ರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿ ವಂಚಿತರು ಇವರೆಲ್ಲರ ಸೇವೆ ಮಾಡುವ ಮೂಲಕ ಅವರಲ್ಲಿ ದೇವರನ್ನು ಕಂಡವರು ಹಾಗೂ ತನ್ನನ್ನು ಟೀಕೆ ಮಾಡಿದವರಿಗೆ ಕೂಡ ಜನಸೇವೆಯನ್ನು ಮಾಡಿದ ಮಹನೀಯರು ಮದರ್ ತೆರೇಸಾರವರು.

See also  ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಗಳು ನಾಪತ್ತೆ

ಆಸೆಯೇ ದುಃಖಕ್ಕೆ ಕಾರಣ, ಆದರೆ ಆಸೆಯೆಂದರೆ ಯಾವುದೋ ವಸ್ತುವಿನ ಮೇಲಿನ ಆಸೆಯಲ್ಲ ನಮ್ಮ ಮನಸ್ಸಿನಲ್ಲಿರುವ ಸ್ವಾರ್ಥ, ದ್ವೇಷ, ಕೋಪ, ಕೋಮುವಾದ ಇವೆಲ್ಲವೂ ಆಸೆಗಳು. ಅದನ್ನು ಬಿಟ್ಟು ನಾವು ಹೊರ ಬಂದಾಗ ಕುವೆಂಪು ಹೇಳಿದಂತೆ ನಾವು ವಿಶ್ವ ಮಾನವರಾಗುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನರು ಭಾರತದ ಭವಿಷ್ಯ, ದೇಶದ 60% ಜನರು 30ರ ವಯಸ್ಸಿನ ಒಳಗಿನವರು. ಯುವಕರು ಮುಂದಿನ ತಾರೆಗಳು. ಮದರ್ ತೆರೆಸಾ ನಾವು ಕಂಡ ಮಹಾನ್ ಮಾನವತಾವಾದಿ. ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲಿ ಪರಮಾತ್ಮನನ್ನು ಕಂಡವರು. ಭಾರತವನ್ನು ಅವರು ಕರ್ಮಭೂಮಿಯನ್ನಾಗಿಸಿದವರು. ಮರಣ ಹೊಂದಿ 26 ವರ್ಷಗಳ ನಂತರವೂ ಮನುಕುಲಕ್ಕೆ ಪ್ರೇರಣೆ ನೀಡುತ್ತಿರುವ ಹಿರಿಮೆ ಅವರದು. ಅವರ ಸ್ಫೂರ್ತಿ ಪಡೆದು ಪ್ರೀತಿ ಹರಡಲಿ ಎಲ್ಲೆಡೆ ಎಂಬ ಧ್ಯೇಯದೊಂದಿಗೆ ಸಂತ ಮದರ್ ತೆರೆಸಾ ವಿಚಾರ ವೇದಿಕೆ ಸ್ಥಾಪಿಸಲ್ಪಟ್ಟಿದೆ ಎಂದು ಅವರು ವಿವರಿಸಿದರು.

ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ವಸಂತ್ ಕುಮಾರ್ ಪ್ರತಿಕ್ರಿಯೆ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ಪಿಆರ್‍ಒ ಫಾ. ಜೆ.ಬಿ. ಸಲ್ದಾನ, ಸಿಸ್ಟರ್ ಶಾಂತಿಧನ್, ಸಿಸ್ಟರ್ ರೋನಾ, ಫಾ. ಪ್ರವೀಣ್, ಫಾ. ರೂಪೇಶ್ ಮಾಡ್ತಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಮಾಜಿ ಸಚಿವ ರಮಾನಾಥ ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು. ವೇದಿಕೆಯ ಜಂಟಿ ಕಾರ್ಯದರ್ಶಿ ಮಂಜುಳಾ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ನಿರೂಪಿಸಿದರು. ಸ್ಟ್ಯಾನಿ ಅಲ್ವಾರಿಸ್ ವಂದಿಸಿದರು. ಪ್ರಾರಂಭದಲ್ಲಿ ಏಕತಾರಿ ಹಾಡುಗಾರ ನಾದ ಮಣಿನಾಲ್ಕೂರು ಬಳಗ ಹಾಗೂ ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು