ಮಂಗಳೂರು: ಕರಾವಳಿಯಾದ್ಯಂತ ಸೋಮವಾರ ಗೌರಿ ಹಬ್ಬ ಮಂಗಳವಾರ ಗಣೇಶ ಚರ್ತುಥಿಗೆ ಭರದ ಸಿದ್ಧತೆ ನಡೆದಿದೆ. ಹೂ ಹಣ್ಣು ತರಕಾರಿಗಳು ಪೂಜಾ ಸಾಮಾಗ್ರಿಗಳ ಮಾರಾಟ ಭರಾಟೆ ಜೋರಾಗಿದೆ.
ಕರಾವಳಿಯಲ್ಲಿ ಗಣೇಶ ಚರ್ತುಥಿ ಪ್ರಯುಕ್ತ ಸೋಮವಾರ ಇದ್ದ ರಜೆಯನ್ನು ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ನಿಗಧಿಗೊಳಿಸಲಾಗಿದೆ. ಭಾನುವಾರ ರಜಾ ದಿನವಾದ್ದರಿಂದ ಜನರು ಬಿಡುವಿನಲ್ಲಿ ಸಕಲ ಸಾಮಾಗ್ರಿಗಳನ್ನು ಕೊಳ್ಳುವುದರಲ್ಲಿ ನಿರತರಾಗಿದ್ದರು. ದ.ಕ ಜಿಲ್ಲಾದ್ಯಂತ ವಿವಿಧ ದೇವಾಲಯಗಳು, ಮನೆಗಳಲ್ಲಿ ಹಾಗು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಚೌತಿ ಹಬ್ಬಕ್ಕೆ ವಿಶೇಷ ಸಿದ್ಧತೆ ನಡೆದಿದೆ. ಇಡೀ ಜಿಲ್ಲೆಯಲ್ಲಿ ಸಿದ್ಧತೆಯ ಸಡಗರ ಆವರಿಸಿದೆ. ವಿವಿದೆಡೆ ಕಲಾವಿದರು ರಚಿಸಿದ ಗಣೇಶನ ಮೂರ್ತಿಗೆ ಉತ್ತಮ ಬೇಡಿಕೆ ಬಂದಿದೆ.
ಚೌತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಕಂಕನಾಡಿ, ಬಿಜೈ ಮುಂಭಾಗ ಸೇರಿದಂತೆ ಎಲ್ಲ ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು ಹಣ್ಣು ತರಕಾರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಗಣೇಶನಿಗೆ ಪ್ರಿಯವಾದ ಕಬ್ಬು ಗರಿಕೆ ಮಾರಾಟವೂ ಜೋರಾಗಿದೆ. ಬೇಡಿಕೆ ಹೆಚ್ಚಿರುವುದರಿಂದ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಚೌತಿ ದಿನ ಸಂಪ್ರದಾಯದಂತೆ ತೆನೆ ಇಡುವ ಸಂಪ್ರದಾಯವೂ ನಡೆಯಲಿದೆ. ಭತ್ತದ ತೆನೆಯನ್ನು ಪೂಜಿಸಿ ಮನೆಯ ತೋರಣಕ್ಕೆ ಕಟ್ಟಲಾಗುತ್ತದೆ.
ಬ್ಯಾಂಕ್ ಗಳಿಗೆ ಇಂದು ರಜೆ: ಜಿಲ್ಲೆಯಲ್ಲಿ ಮಂಗಳವಾರ ಸಾರ್ವತಿಕ ರಜೆ ಘೋಷಣೆ ಮಾಡಿದ್ದರೂ, ಬ್ಯಾಂಕ್ ಗಳಿಗೆ ಹಬ್ಬದ ಪ್ರಯುಕ್ತ ಸೋಮವಾರವೇ ರಜೆ ಇರಲಿದೆ.
ಗಣೇಶ ಚರ್ತುಥಿಗಾಗಿ ಗಣೇಶನ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆಯಿದ್ದು ಐಕಳದ ಸಮೀಪದ ಕುದ್ರಿ ಪದವು ಸವಿತಾ ಆರ್ಟ್ಸ್ ಕಲಾವಿದ ಸದಾಶಿವ ಅವರಿಂದ ೮೦ಕ್ಕೂ ಹೆಚ್ಚು ಗಣಪತಿ ವಿಗ್ರಹಗಳು ರಚನೆಗೊಂಡಿದ್ದು ಅಂತಿಮ ರೂಪ ಪಡೆದುಕೊಳ್ಳುತ್ತಿವೆ.