ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲತೆಗಾಗಿ ಮನೆಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯವನ್ನು ವಿಸ್ತರಿಸಿದೆ. ಆಕರ್ಷಕ ಬಡ್ಡಿದರ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ ‘ಕೆಬಿಎಲ್- ಸ್ವರ್ಣ ಬಂಧು’ ಎನ್ನುವ ಹೆಸರಿನೊಂದಿಗೆ ಈ ಯೋಜನೆ ಜಾರಿಗೆ ಬರಲಿದೆ. ಆರಂಭಿಕ ಹಂತದಲ್ಲಿ ಈ ಸೌಲಭ್ಯವು ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ಣಾಟಕ ಬ್ಯಾಂಕಿನ ಎಲ್ಲಾ ಶಾಖೆಗಳೂ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಿದೆ. ಪ್ರಸಿದ್ಧವಾದ ಮಣಿಪಾಲ ಗ್ರೂಪ್ ಕಂಪೆನಿ ಬೆಂಬಲಿತ ‘ಸಹಿಬಂಧು’ ಎನ್ನುವ ಗೋಲ್ಡ್ ಲೋನ್ ವ್ಯವಹಾರ ಸಂಬಂಧಿತ ಸಂಸ್ಥೆಯೊಂದಿಗಿನ ಸಹಭಾಗಿತ್ವದೊಂದಿಗೆ ‘ಕೆಬಿಎಲ್- ಸ್ವರ್ಣ ಬಂಧು’ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಲಿದೆ.
ಈ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಶ್ರಿಕೃಷ್ಣನ್ ಹೆಚ್ “ಬ್ಯಾಂಕ್ ಗುಣಮಟ್ಟದ ಗೋಲ್ಡ್ ಲೋನ್ ನೀಡುವುದರೊಂದಿಗೆ ಗೋಲ್ಡ್ ಲೋನ್ ಸೌಲಭ್ಯವನ್ನು ಅತೀ ಹೆಚ್ಚಿನ ಗ್ರಾಹಕರಿಗೆ ವಿಸ್ತರಿಸಲು ಈ ಯೋಜನೆ ಅನುಕೂಲವಾಗಿದೆ. ಕರ್ಣಾಟಕ ಬ್ಯಾಂಕ್ ಹಾಗೂ ಸಹಿಬಂಧು ಸಂಸ್ಥೆಗಳ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯು ಗ್ರಾಹಕರಿಗೆ ಉತ್ತಮ ಅನುಭೂತಿ ನೀಡಲಿದೆ. ಗ್ರಾಹಕರು ಈ ಯೋಜನೆಯ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು” ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ “ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್‌ಟೆಕ್ ಕಂಪೆನಿಗಳೊಂದಿಗೆ ಬ್ಯಾಂಕ್ ಸಹಭಾಗಿತ್ವವನ್ನು ಹೊಂದಿದೆ. ಕೆಬಿಎಲ್- ಸ್ವರ್ಣ ಬಂಧು ಯೋಜನೆಯೂ ಸಹ ಅಂತಹ ಉಪಕ್ರಮಗಳಲ್ಲಿ ಒಂದಾಗಿದೆ. ಶತಮಾನೋತ್ಸವವನ್ನು ಆಚರಿಸುತ್ತಿರುವ ಬ್ಯಾಂಕ್ ಮುಂಬರುವ ದಿನಗಳಲ್ಲಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೊಸ ರೂಪದಲ್ಲಿ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲಿದೆ” ಎಂದು ನುಡಿದರು.
ಸಹಿಬಂಧು ಸಂಸ್ಥೆಯ ಸಹಸಂಸ್ಥಾಪಕ ರಾಜೇಶ್ ಶೇಟ್ ಮಾತನಾಡಿ “ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಕರ್ಣಾಟಕ ಬ್ಯಾಂಕಿನೊಂದಿಗೆ ಗೋಲ್ಡ್ ಲೋನ್ ವಿತರಣೆಗಾಗಿ ಈ ಸಹಭಾಗಿತ್ವವು ಅತ್ಯಂತ ಸಂತಸ ತಂದಿದೆ. ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಗೋಲ್ಡ್ ಲೋನ್ ಸೌಲಭ್ಯವನ್ನು ಅವರ ಮನೆಬಾಗಿಲಿಗೆ ತಲುಪಿಸುವಲ್ಲಿ ಈ ಸಹಭಾಗಿತ್ವವು ಸಹಕಾರಿಯಾಗಿದೆ. ಕರ್ಣಾಟಕ ಬ್ಯಾಂಕಿನೊಂದಿಗಿನ ಈ ಅವಕಾಶಕ್ಕಾಗಿ ನಾವು ಹೆಮ್ಮೆ ಪಡುತ್ತೇವೆ” ಎಂದು ನುಡಿದರು.