ಮಂಗಳೂರು: ಮಂಗಳೂರು ವಿವಿ ಹಾಸ್ಟೆಲ್ ನ ಬದಲಿಗೆ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಮಾಡಲೇಬೇಕೆಂದು ಬಿಜೆಪಿ ಸಂಘ ಪರಿವಾರ ಈ ಹಿಂದೆ ಪಟ್ಟು ಹಿಡಿದಿದ್ದು, ರಾಜ್ಯಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಿ ಉಪಕುಲಪತಿ ಜಯರಾಜ್ ಅಮೀನ್ ಅವರೇ ವಿವಿ ಆಡಿಟೋರಿಯಂನಲ್ಲಿಯೇ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮೂಲಕ ವಿವಾದ ಸದ್ಯದ ಮಟ್ಟಿಗೆ ಅಂತ್ಯ ಕಂಡಂತಾಗಿದೆ.
ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ಧಾರ್ಮಿಕ ವಿಧಿಗಳನ್ನು ಸ್ವತಃ ವಿಸಿಯವರೇ ನೆರವೇರಿಸಿದ್ದಾರೆ. ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶನ ಉತ್ಸವ ಮಾಡಿದ್ದು ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಮಾಡಲಾಗಿತ್ತು, ಉತ್ತರ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಮಾಡಲೇಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರ ಪಟ್ಟು ಹಿಡಿದಿದ್ದರಿಂದ ವಿವಾದ ಉಂಟಾಗಿತ್ತು. ಹಾಸ್ಟೆಲ್ ವ್ಯಾಪ್ತಿಯಲ್ಲಿ ಸಣ್ಣ ಮಟ್ಟಿಗೆ ಮಾತ್ರ ಗಣೇಶೋತ್ಸವ ಸಾಕು ಎನ್ನುವುದು ವಿಸಿಯವರ ಇಂಗಿತ ಆಗಿತ್ತು. ವಿವಾದ ಏರ್ಪಟ್ಟಿದ್ದರಿಂದ ಸಂಘ ಪರಿವಾರ ಪ್ರತಿಭಟನಾ ಸಭೆ ನಡೆಸಿ, ನೀವು ಮಾಡದಿದ್ದರೆ ನಾವೇ ಆ ಕೆಲಸ ಮಾಡ್ತೀವಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದು ಬಿಸಿ ಮುಟ್ಟುವಂತಾಗಿತ್ತು. ಇದರಿಂದಾಗಿ ಗಣೇಶೋತ್ಸವ ಬಗ್ಗೆ ಕುತೂಹಲವೂ ಉಂಟಾಗಿತ್ತು, ಅಹಿತಕರ ಘಟನ ನಡೆಯದಂತೆ ಪೊಲೀಸರು ಎಂಟ್ರಿ ಗೇಟ್ ಸೇರಿ ಸುತ್ತಮುತ್ತ ಸರ್ಪಗಾವಲು ಹಾಕಿದ್ದರು. ಇಂದು ವಿಸಿಯವರೇ ಸರಳ ರೀತಿಯಲ್ಲಿ ಮಂಗಳಾ ಆಡಿಟೋರಿಯಂನಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದು ವಿವಾದ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಆರ್‌ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ಭರತ್ ಶೆಟ್ಟಿ ಅವರು ಕೂಡ ಪಾಲ್ಗೊಂಡಿದ್ದು, ಪೂರ್ಣಾಹುತಿ ವೇಳೆ ಹಾಜರಿದ್ದರು.