ಕಡಬ: ಶಾಲಾ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ತುರ್ತು ಸ್ಪಂಧಿಸಿದ ಸಿಎಂ ಸಿದ್ದರಾಮಯ್ಯ ಕಚೇರಿ, ನೀಡಿದ ಸೂಚನೆ ಮೇರೆಗೆ ಕಡಬ ಪೊಲೀಸರು ಅಂಗಡಿಯೊಂದಕ್ಕೆ ದಾಳಿ ನಡೆಸಿ ಮಾರಾಟವಾಗುತ್ತಿದ್ದ ತಂಬಾಕು ಮತ್ತು ಸಿಗರೇಟನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ತಂಬಾಕು ನಿಷೇದ ಕಾಯ್ದೆಯಡಿ ಅಂಗಡಿಯಾತನಿಗೆ ದಂಡ ವಿಧಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕೈಕಂಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೩ನೇ ತರಗತಿಯ ವಿದ್ಯಾರ್ಥಿನಿ ಅಯೊರ ಎಂಬಾಕೆ ಪ್ರತಿಕೆಯೊಂದಕ್ಕೆ ಪತ್ರ ಬರೆದಿದ್ದು, ಅದರಲ್ಲಿ ಶಾಲೆ ಬಳಿಯಿರುವ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಮತ್ತು ಅದ ಪೊಟ್ಟಣ ಶಾಲೆ ಆವರಣದಲ್ಲಿ ಬಿದ್ದಿರುತ್ತದೆ . ನಿಯಮವಿದ್ದರೂ ನಿಷೇಧ ಮಾಡದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಳು.
ಪತ್ರಿಕೆಯ ಸಂಪಾದಕೀಯ ಮಂಡಳಿ ಈ ಪತ್ರವನ್ನು ಸಿಎಂ ಸಚಿವಾಲಯದ ಕುಂದುಕೊರತೆ ವಿಭಾಗದ ವಿಶೇಷಾಧಿಕಾರಿ ಡಾ ವೈಷ್ಣವಿ ಅವರಿಗೆ ರವಾನಿಸಿದ್ದಾರೆ. ಸಿಎಂ ಕಚೇರಿಯಿಂದ ಬಾಲಕಿ ಮನೆಗೆ ಕರೆ ಬಂದಿದ್ದು ಪತ್ರದ ಬಗ್ಗೆ ವಿಚಾರಿಸಿದ್ದಾರೆ.
ನಂತರ ಈ ಮಾಹಿತಿಯು ಸಿಎಂ ಕಚೇರಿಯಿಂದ ಪೊಲೀಸ್ ಇಲಾಖೆಗೆ ರವಾನೆಯಾಗಿದೆ. ಕಡಬ ಎಸ್ ಐ ಅಭಿನಂದನ್ ನೇತೃತ್ವದಲ್ಲಿ ಪೊಲೀಸರು ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ದಾಳಿ ವೇಲೇ ಶಾಲೆಯಿಂದ ೨೦ ಮೀಟರ್ ದೂರದಲ್ಲಿ ನವೀನ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ತಂಬಾಕು & ಸಿಗರೇಟ್ ಮಾರಾಟ ಕಂಡು ಬಂದಿದೆ.
ಅವುಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿ, ಸಿಎಂ ಕಛೇರಿಗೆ ಮಾಹಿತಿ ರವಾನಿಸಿದ್ದಾರೆ. ಇನ್ನು ವಿದ್ಯಾರ್ಥಿನಿ ಅಯೊರಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.