ಮಂಗಳೂರು: ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಹಬ್ಬವನ್ನು ಸೆ.19ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧಾ ಭಕ್ತಿಯಿಂದ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.
ಬೆಳಗ್ಗೆ ಉಷಾಃ ಕಾಲ ಪೂಜೆ, ಮಹಾಗಣಪತಿ ದೇವರಿಗೆ ಕಲ್ಪೋಕ್ತ ಪೂಜೆ, ಮಹಾಗಣಪತಿ ಹೋಮ ಪೂರ್ಣಾಹುತಿ ಹಾಗೂ ಮಧ್ಯಾಹ್ನ ಐದು ಸಾವಿರ ತೆಂಗಿನ ಕಾಯಿಯ ವಿಶೇಷ ಪಲ್ಲಪೂಜೆ ಮತ್ತು ಬಳಿಕ ರಥೋತ್ಸವ ನಡೆಯಿತು.
ಮಹಾಗಣಪತಿ ದೇವರ ಎದುರು ಕಬ್ಬುಗಳಿಂದ ಕೋಟೆಯ ರೀತಿ ಕಟ್ಟಿ ಅದರ ಒಳಗೆ 5 ಸಾವಿರ ತೆಂಗಿನ ಕಾಯಿ ಭಾಗ ಮಾಡಿ ಹಾಕಿ ಬಳಿಕ ಗಣಪತಿ ದೇವರಿಗೆ ಇಷ್ಟವಾದ ಎಲ್ಲವುಗಳನ್ನೂ ಅದರ ಒಳಗೆ ಹಾಕಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಭಕ್ತರು ಸೇವಾರೂಪದಲ್ಲಿ ನೀಡಿದ್ದ ತೆಂಗಿನ ಕಾಯಿಗಳನ್ನು ಬಳಸಿಕೊಂಡು ಈ ಪೂಜೆ ನಡೆಸಲಾಯಿತು. ಸಂಜೆ ಚೌತಿ ಮಹಾ ಗಣಪತಿ ಹೋಮದ ಪ್ರಸಾದ ವಿತರಣೆ ನಡೆಯಿತು, ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು.