ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಒಂದೊಂದೇ ಮಾಹಿತಿ ಹೊರಬೀಳುತ್ತಿದೆ. ಇದೀಗ ಇಬ್ಬರು ಮಾಸ್ಟರ್ಮೈಂಡ್ಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಇದರಲ್ಲಿ ಪ್ರಮುಖ ಆರೋಪಿಗಳಾದ ತುಫೈಲ್ ಎಂ ಎಚ್ ಹಾಗೂ ಮೊಹಮ್ಮದ್ ಜಬೀರ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದಂತಾಗಿದೆ.
ಚಾರ್ಜ್ಶೀಟ್ ಸಲ್ಲಿಸಲಾದ ತುಫೈಲ್ ಕೊಡಗು ಮೂಲದವನೆಂದು ತಿಳಿದು ಬಂದಿದೆ. ಈತ ಪಿಎಫ್ಐ ಸರ್ವೀಸ್ ಟೀಂನ ಸಕ್ರಿಯ ಸದಸ್ಯನಾಗಿದ್ದು, ಮಾಸ್ಟರ್ ಟ್ರೈನರ್ ಆಗಿಯೂ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ದಕ್ಷಿಣ ಕನ್ನಡದ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಈತ ತಮಿಳುನಾಡಿನ ಈರೋಡ್,ಕೊಡಗು,ಮೈಸೂರುಗಳಲ್ಲಿ ಆಶ್ರಯ ನೀಡಿದ್ದನೆಂದು ತಿಳಿದು ಬಂದಿದೆ. ಮತ್ತೋರ್ವ ಆರೋಪಿ ಮೊಹಮ್ಮದ್ ಜಬೀರ್ ದಕ್ಷಿಣ ಕನ್ನಡ ಜಿಲ್ಲೆಯ ಪಿಎಫ್ಐ ಜಿಲ್ಲಾಧ್ಯಕ್ಷನಾಗಿದ್ದು ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ ನಡೆದಿದ್ದ ಸಭೆಗಳಲ್ಲಿ ಭಾಗಿಯಾಗಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.