ಪುತ್ತೂರು: ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸುವ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುವ ಗಣೇಶೋತ್ಸವ ನಡೆಸಲು ಆಯಾ ಸಮಿತಿಯರು ಜವಾಬ್ದಾರಿ ವಹಿಸಬೇಕು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಗಣೇಶೋತ್ಸವ ನಡೆಸುವ ಕಡೆಗಳಲ್ಲಿ ಬೆಂಕಿ ನಂದಿಸುವ ವ್ಯವಸ್ಥೆ ಇರಬೇಕು. ಪೆಂಡಾಲ್ ಸುರಕ್ಷತೆಯೊಂದಿಗೆ ಸಮರ್ಪಕ ಬೆಳಕಿನ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಇರಬೇಕು. ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಈ ಬಾರಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ನೇರವಾಗಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದಲೇ ನೇರ ಸೂಚನೆಗಳು ಬಂದಿವೆ. ರಾತ್ರಿ ೧೦ ಗಂಟೆಗೆ ಮೊದಲು ಗಣೇಶೋತ್ಸವದ ಮೆರವಣಿಗೆ ಮುಕ್ತಾಯವಾಗಬೇಕು. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯ ಅವಧಿಯಲ್ಲಿ ಸೌಂಡ್ ಬಳಕೆಯಾಗದಂತೆ ಸರ್ವೋಚ್ಛ ನ್ಯಾಯಾಲಯದ ನಿಯಮವನ್ನು ಪಾಲಿಸಬೇಕು ಎಂದು ಹೇಳಿದರು.
ಆದಷ್ಟು ಡಿಜೆಗಳನ್ನು ಬಳಸಬೇಡಿ. ಇಡೀ ರಾಜ್ಯದಲ್ಲಿಯೇ ದ.ಕ. ಜಿಲ್ಲೆಯಲ್ಲಿ ರೀತಿ-ನೀತಿ, ಕಾನೂನುಗಳನ್ನು ಪಾಲಿಸುವ ಜನರಿದ್ದಾರೆ. ಆಡಂಬರಕ್ಕಿಂತ ಭಕ್ತಿ, ಪ್ರೀತಿಯಿಂದ ದೇವರ ಸೇವೆ ಮಾಡಿದರೆ ಅದರ ಫಲವೂ ಲಭಿಸುತ್ತದೆ. ಈ ಕಾರಣದಿಂದ ನಿಯಮಗಳ ಪಾಲನೆಯೊಂದಿಗೆ ಶಾಂತಿಯುತ ಗಣೇಶೋತ್ಸವ, ಮೆರವಣಿಗೆಗೆ ಆದ್ಯತೆ ನೀಡಬೇಕು ಎಂದು ಆಂಜನೇಯ ರೆಡ್ಡಿ ವಿನಂತಿಸಿದರು.
ಸಬ್ ಇನ್‌ಸ್ಪೆಕ್ಟರ್ ಸೇಸಮ್ಮ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು. ನಗರ ಠಾಣಾ ವ್ಯಾಪ್ತಿಯ ೧೫ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ನಗರ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಪ್ರಮುಖರಾದ ದೇವಾನಂದ ಕೆ., ಕುಮಾರನಾಥ್, ಕೇಶವ ಭಂಡಾರಿ, ರಾಧಾಕೃಷ್ಣ ನಂದಿಲ, ರಾಜೇಶ್ ಬನ್ನೂರು, ಸುದೇಶ್ ಚಿಕ್ಕಪುತ್ತೂರು, ಯು.ಲೋಕೇಶ್ ಹೆಗ್ಡೆ, ಪಿ.ವಿ. ದಿನೇಶ್, ಪ್ರಕಾಶ್, ಎಚ್. ಉದಯ ಮೊದಲಾದವರು ಪಾಲ್ಗೊಂಡರು.