ಉಜಿರೆ: ಚಾರ್ಮಾಡಿಯ ಪಾಂಡಿಕಟ್ಟೆ ಕೃಷ್ಣ ನಗರ ಎಂಬಲ್ಲಿ ಕೊಟ್ಟಿಗೆಹಾರದಿಂದ ಬೆಳ್ತಂಗಡಿ ಕಡೆ ತೆರಳುತ್ತಿದ್ದ ಕಾರು ದರೆಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಪರಸ್ಪರ ಸಂಬಂಧಿಕರಾದ 6ಮಂದಿ ಬೆಳ್ತಂಗಡಿ ಕಡೆ ಪ್ರಯಾಣ ಬೆಳೆಸುತ್ತಿದ್ದ ವೇಳೆ,ಚಾರ್ಮಾಡಿ ಘಾಟಿ ಇಳಿದ ಕೂಡಲೇ ಕಾರು ದರೆಗೆ ಡಿಕ್ಕಿಯಾಗಿದ್ದು ಸಾಗರದ ವಿನೋದ್ ಕುಮಾರ್ ಡಿ. (41),ಶೃಂಗೇರಿಯ ಅನಸೂಯಾ(72) ಎಂಬವರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಗರದ ಶರ್ಮಿಳಾ(41)ಪ್ರಣವಸ್ಥಿತಾ(11), ಶೃಂಗೇರಿಯ ಸಿಂಧೂ (37),ಶ್ರಾವಣಿ(10) ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಉಜಿರೆ ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.