ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ‘ಕೃಷಿಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ’ (ಐ.ಸಿ.ಟಿ. ಇನ್ ಅಗ್ರಿಕಲ್ಚರ್) ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಸೆ.26ರಂದು ನಡೆಯಿತು.
ಉಜಿರೆ ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್.ಡಿ.ಎಂ. ಐಟಿ) ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಮಧುಸೂದನ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಐ.ಸಿ.ಟಿ. (ಇನ್ಫಾರ್ಮೇಶನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನಾಲಜಿ)ಯನ್ನು ಬಳಸಿಕೊಂಡು ರೈತರು ಯಾವ ರೀತಿ ಬೆಳೆ ಬೆಳೆಯಬಹುದು ಎಂಬುದನ್ನು ಅವರು ತಿಳಿಸಿದರು. ಮಾರುಕಟ್ಟೆ ಪರಿಸ್ಥಿತಿ, ವಾತಾವರಣ ಸ್ಥಿತಿಗತಿಯ ಬಗ್ಗೆ ಅರಿವು ಹೊಂದಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಧ.ಮಂ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು, “ಇತ್ತೀಚಿನ ದಿನಗಳಲ್ಲಿ ಕೃಷಿಕರು ಹವಾಮಾನ ವೈಪರೀತ್ಯ ಹಾಗೂ ಬೆಲೆ ಏರಿಳಿತದಿಂದ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಮಾಹಿತಿ ತಂತ್ರಜ್ಞಾನವನ್ನು ಅವರು ಸರಿಯಾಗಿ ಬಳಸಿದಲ್ಲಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು” ಎಂದರು.
ಅತಿಥಿಗಳಿಗೆ ವಿಭಾಗದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿಭಾಗದ ಮುಖ್ಯಸ್ಥ ಡಾ. ಗಣರಾಜ್ ಕೆ., ಸಹಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ- ಉಪನ್ಯಾಸಕ ಅಭಿನಂದನ್ ಕೆ.ಸಿ. ಜೈನ್ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸೌಂದರ್ಯ ಸ್ವಾಗತಿಸಿ, ರಿತಿಕಾ ವಂದಿಸಿ, ಅನುಪ್ರಿಯಾ ಘೋಷ್ ನಿರೂಪಿಸಿದರು.