ಉಡುಪಿ: ಕರಾವಳಿ ಬೈಪಾಸ್ ಬಳಿಯ ಕೂಲಿ ಕಾರ್ಮಿಕರ ಕಾಲೋನಿಯಲ್ಲಿ ಎರಡು ವರ್ಷ ನಾಲ್ಕು ತಿಂಗಳ ಮಗುವನ್ನು ಅಪಹರಿಸಿದ ಘಟನೆಯು ನಡೆದಿದೆ. ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಪೋಲಿಸರ ಜಂಟಿ ಕಾರ್ಯಾಚರಣೆಯಿಂದ 12 ಗಂಟೆಯೊಳಗೆ ಮಗುವನ್ನು ರಕ್ಷಿಸಿದ್ದಾರೆ.
ಪೊಲೀಸರು ಆರೋಪಿ ಪರಶುರಾಮನನ್ನು ಕುಮಟ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಪೊಲೀಸರ ಈ ಮಿಂಚಿನ ಕಾರ್ಯಾಚರಣೆಯಿಂದ ಮಗುವಿನ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬಾಗಲಕೋಟೆ ಮೂಲದ ಮುಧೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿ ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಪಕ್ಕದ ಗುಡಿಸಲಿನಲ್ಲಿದ್ದ ಪರಶು ಚಹಾ ಕುಡಿಸುತ್ತೇನೆ ಎಂದು ಮಗು ಶಿವರಾಜ್ ನನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.