ಉಡುಪಿ : ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು ಸೋಮವಾರ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ. ಬನ್ನಂಜೆಯ ಹೊಸ ಸರಕಾರಿ ಬಸ್ ನಿಲ್ದಾಣ ಉದ್ಘಾಟನೆಯ ಸಹಿತ ನಿಬಿಡ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಬೊಮ್ಮಾಯಿಯವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹೀಗಾಗಿ ಜಿಲ್ಲೆಯ ಸಮಸ್ಯೆ ಮತ್ತು ಸಮಗ್ರ ಅಭಿವೃದ್ಧಿಗೆ ಆಗ ಬೇಕಿರುವ ಯೋಜನೆಗಳು ಅವರಿಗೆ ಹೊಸದಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಹಿತ ಕೃಷಿ ಮತ್ತು ಮೀನುಗಾರಿಕಾ ಕ್ಷೇತ್ರ ದಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶ ಇರುವುದರಿಂದ ಹೊಸ ಘೋಷಣೆ ಅಥವಾ ಅನುದಾನ ನೀಡಬಹುದಾದ ನಿರೀಕ್ಷೆ ಸಹಜ.
ಜಿಲ್ಲೆಯ ಐವರು ಶಾಸಕರು ಆಡಳಿತಾರೂಢ ಪಕ್ಷದವರೇ ಆಗಿದ್ದಾರೆ. ಇಬ್ಬರು ಸಚಿವರು ಜಿಲ್ಲೆಯವರೇ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಪ್ರವಾಸ ಅನೇಕ ನಿರೀಕ್ಷೆಗಳನ್ನು ಮೂಡಿಸಿದೆ