ಉಡುಪಿ: ಸೈನ್ಯಕ್ಕೆ ಸೇರಲು ಇಚ್ಛಿಸುವವರು, ದೇಶದ ಮೇಲೆ ಭಕ್ತಿ ಇರುವವರು ಎಂದೂ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದಿಲ್ಲ ಮತ್ತು ರೈಲಿಗೆ ಬೆಂಕಿಯನ್ನು ಹಚ್ಚುವುದಿಲ್ಲ. ಅನಾವಶ್ಯಕವಾಗಿ ಗೊಂದಲ ನಿರ್ಮಿಸುವ ಮತ್ತು ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ದೇಶಕ್ಕೆ ನಷ್ಟ ಮಾಡುವ ವ್ಯವಸ್ಥಿತ ಷಡ್ಯಂತ್ರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇಶದ ವಿವಿಧ ಭಾಗದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಆದಾಗ ಹಲವು ಪಕ್ಷಗಳ ನಾಯಕರು ಮೌನವಾಗಿದ್ದರು. ಇಂಥ ಘಟನೆಯನ್ನು ನಾವು ಪದೇಪದೆ ನೊಡುತ್ತಿದ್ದೇವೆ. ಶಾಲಾ ಶಿಕ್ಷಣದಿಂದಲೇ ಯುವ ಪೀಳಿಗೆಗೆ ದೇಶಭಕ್ತಿ ತುಂಬುವ ಕಾರ್ಯ ವಿದೇಶಗಳಲ್ಲಿ ಆಗುತ್ತಿದೆ.
ಭಾರತದ ಯುವಕರಿಗೆ ಅಗ್ನಿವೀರ್ ಯೋಜನೆ ಮೂಲಕ ನಾಲ್ಕು ವರ್ಷಗಳ ತರಬೇತಿ ಸಿಗಲಿದೆ. ಇದಾದ ಅನಂತರದಲ್ಲಿ ಆಯುವಕರು ಖಂಡಿತವಾಗಿಯೂ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವ ಜತೆಗೆ ಉತ್ತಮ ಸಮಾಜವನ್ನು ನಿರ್ಮಿಸಲಿದ್ದಾರೆ. ಆದರೆ ಉತ್ತಮ ಸಮಾಜ ನಿರ್ಮಾಣ ವಿಪಕ್ಷಗಳಿಗೆ ಬೇಕಾಗಿಲ್ಲ. ಸಮಾಜ ಕೆಟ್ಟ ಹಾದಿಯಲ್ಲೇ ಸಾಗಬೇಕು ಮತ್ತು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಅವರಿಗೆ ಬೇಕಿರುವುದು.
ಕೇಂದ್ರ ಸರಕಾರವು ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲದ ಸದ್ಬಳಕೆ ಮೂಲಕ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಅಗ್ನಿವೀರ್ ಯೋಜನೆ ರೂಪಿಸಿದೆ. ಇಲ್ಲಿ ಯಾರು ಕೂಡ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಸ್ವ ಇಚ್ಛೆಯಿಂದ ಕುಟುಂಬದವರ ಅನುಮತಿ ಪಡೆದೇ ಅಗ್ನಿವೀರರಾಗಲಿದ್ದಾರೆ. ಈ ಮೂಲಕ ದೇಶದಲ್ಲಿ ಯುವ ಪಡೆ ನಿರ್ಮಾಣವಾಗಲಿದೆ ಎಂದರು.