News Kannada
Thursday, August 11 2022

ಉಡುಪಿ

ಮಣಿಪಾಲದ ಹಿರಿಯ ಚೇತನ ‘ಉದಯವಾಣಿ’ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅಸ್ತಂಗತ - 1 min read

T. Mohandas Pai, founder of 'Udayavani', a veteran of Manipal

ಮಣಿಪಾಲ: ಮಣಿಪಾಲದ ಪೈ ಕುಟುಂಬದ ಹಿರಿಯರಾದ ವಿವಿಧ ಸಂಘಸಂಸ್ಥೆೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದ್ದ ತೋನ್ಸೆೆ ಮೋಹನದಾಸ್ ಪೈ (89) ಅಸೌಖ್ಯದಿಂದ ಜು. 31ರಂದು ಮಣಿಪಾಲದ ಆಸ್ಪತ್ರೆೆಯಲ್ಲಿ ನಿಧನ ಹೊಂದಿದರು.

ಮೃತರು ತಮ್ಮಂದಿರಾದ ಡಾಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸಹೋದರ ಟಿ.ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ.

ಅವರು ಆಸ್ಪತ್ರೆೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆೆ ಪಡೆಯುತ್ತಿದ್ದರು. ಪೈ ಕುಟುಂಬದ ಎಲ್ಲ ಸದಸ್ಯರು, ಭಾವ ಡಾ.ಬಾಲಕೃಷ್ಣ ಪೈ ಮೊದಲಾದವರು ಜತೆಯಲ್ಲಿದ್ದು ಆರೈಕೆಯಲ್ಲಿ ತೊಡಗಿದ್ದರು.

ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾ. ಟಿ. ಎಂ. ಎ ಪೈ ಪ್ರತಿಷ್ಠಾನ, ಡಾ. ಟಿ.ಎಂ.ಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆೆ ಎಂಜಿಎಂ ಕಾಲೇಜಿನ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ನ ಪರ‍್ವ ರೂಪ ಐಸಿಡಿಎಸ್ ಲಿ ‘ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ ವರ‍್ಕ ಲಿ. ಮೊದಲಾದ ಸಂಸ್ಥೆೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆೆಗಳ ಬೆಳವಣಿಗೆಗೆ ಕಾರಣರಾದವರು.

ಕಾನೂನು ಪದವಿಯಲ್ಲಿ ಮೊದಲ ರ‍್ಯಾಂಕ್                                                                                                                     1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾ. ಟಿ.ಎಂ.ಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು.

ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದರು. ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿ ಇವರು. ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿ.ವಿ.ಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ಆಗ ಕಾನೂನು ಪದವಿ ಅಧ್ಯಯನ ನಡೆಸಲು ಇಲ್ಲಿ ಅವಕಾಶವಿರಲಿಲ್ಲ. ಕರಾವಳಿ ಪ್ರದೇಶ ಮದ್ರಾಸ್ ಪ್ರಾಂತ್ಯಕ್ಕೆೆ ಸೇರಿದ ಕಾರಣ ಒಂದೋ ಮದ್ರಾಸ್‌ಗೆ ತೆರಳಬೇಕಿತ್ತು. ಇಲ್ಲವಾದರೆ ಮುಂಬಯಿ ಪ್ರಾಂತ್ಯಕ್ಕೆೆ ಹೋಗಬೇಕಿತ್ತು. ಕರಾವಳಿಯವರಿಗೆ ಮದ್ರಾಸ್‌ಗಿಂತ ಮುಂಬಯಿ ಪ್ರಾಂತ್ಯ ಹೆಚ್ಚು ಪರಿಚಿತವಾಗಿದ್ದರಿಂದ ಅವರು ಮುಂಬಯಿ ಪ್ರಾಂತ್ಯದ ಕೊಲ್ಹಾಪುರಕ್ಕೆೆ ಹೋದರು.

See also  ರಾಜ್ಯವೇ ಹೆಮ್ಮೆ ಪಡುವಂತೆ ಮೇಕೆದಾಟು ಯೋಜನೆ ಜಾರಿ; ಸಚಿವ ಕೋಟ ಶ್ರೀನಿವಾಸ ಪೂಜಾರಿ

ವೃತ್ತಿ ಪ್ರವೇಶ
ಶಿಕ್ಷಣದ ಬಳಿಕ ತಂದೆಯವರು ಆರಂಭಿಸಿದ ಸಂಸ್ಥೆೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್‌ವೆಸ್‌ಟ್‌‌ಮೆಂಟ್‌ಸ್‌‌ನ ಜನರಲ್ ಮೆನೇಜರ್ ಆಗಿ. ಇದರ ಜತೆ ಮಣಿಪಾಲ್ ಪವರ್ ಪ್ರೆೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು.

ಆಡಳಿತ ತಜ್ಞ- ಯೋಜನತಜ್ಞ
ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದರೆ ಟಿ.ಸತೀಶ್ ಪೈಯವರು ಉತ್ಪಾದನೆಯ ಜವಾಬ್ದಾರಿಯನ್ನು ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್‌ ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು. 1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಗಿ ಪ್ರೆೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರ ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆೆಸ್‌ಗೆ ಬಂದವು. ಅತ್ಯಾಧುನಿಕ ಆಫ್‌ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್‌ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ. ಈ ಮೂಲಕ ಮಣಿಪಾಲ ಪ್ರೆೆಸ್ ದೇಶಮಟ್ಟದ ಮಾನ್ಯತೆಯನ್ನು ಪಡೆಯಿತು. ಮೈಸೂರು, ಕರ್ನಾಟಕ ವಿ.ವಿ.ಗಳ ಮತ್ತು ವಿವಿಧ ಪ್ರಕಾಶನ ಸಂಸ್ಥೆೆಗಳ ಪಠ್ಯ, ಪುಸ್ತಕಗಳನ್ನು ಮುದ್ರಿಸಿದ ಕೀರ್ತಿಯು ಈಗಲೂ ಮುನ್ನಡೆಯುತ್ತಿದೆ.

ಉದಯವಾಣಿ ಶಕೆ
1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ‘ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್‌ಸ್‌ ಲಿ.ನಿಂದ ಉದಯವಾಣಿ ಆರಂಭಗೊಂಡಿತು. ವೆಬ್ ಆಫ್‌ಸೆಟ್ ಯಂತ್ರದಿಂದ ಮುದ್ರಣ ಕಾರ್ಯ ಆರಂಭಮಾಡಿದ ಅತಿ ಹಿರಿಯ ದಿನ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದು. ಪೈಯವರ ಸಮರ್ಥ ನಾಯಕತ್ವದಲ್ಲಿ ‘ಉದಯವಾಣಿ’ಯು ಗುಣಮಟ್ಟದ ಮುದ್ರಣಕ್ಕಾಗಿ ಹಲವು ವರ್ಷ ನಿರಂತರವಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ತರಂಗ ಶಕೆ
1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು. ಮುಖಪುಟ ಮತ್ತು ಒಳಪುಟಗಳನ್ನು ಕಲರ್‌ನಲ್ಲಿ ಮುದ್ರಿಸಲು ಬೇಕಾದ ಅಲ್ಟ್ರಾಮೋಡರ್ನ್ ವೆಬ್ ಆಫ್‌ಸೆಟ್ ಯಂತ್ರವನ್ನು ಸ್ಥಾಪಿಸಲಾಯಿತು. ತರಂಗಕ್ಕೆೆ ಅಗತ್ಯವಾದ ಸ್ವಯಂಚಾಲಿತ ಬೈಂಡಿಂಗ್ ಯಂತ್ರವನ್ನೂ ಅಳವಡಿಸಲಾಯಿತು. ಈ ಗುಣಮಟ್ಟಕ್ಕಾಗಿ 2 ಲಕ್ಷ ಪ್ರಸರಣ ಸಂಖ್ಯೆೆ ದಾಟಿತು.

ವಿದೇಶ ಪ್ರವಾಸಾನುಭವ
ಯುನೈಟೆಡ್ ಕಿಂಗ್‌ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈಯವರು, ದ್ರುಪ (ಜರ್ಮನಿ), ಐಪೆಕ್‌ಸ್‌ (ಯುಕೆ), ಪ್ರಿಂಟ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ವಿದೇಶಗಳ ಪತ್ರಿಕೆಗಳ ವಿನ್ಯಾಸ, ಸುದ್ದಿ ವಿಶ್ಲೇಷಣೆಗಳನ್ನು ಗಮನಿಸಿ ಉದಯವಾಣಿಯಲ್ಲಿ ಜಾರಿಗೆ ತರಲು ಶ್ರಮಿಸಿದರು.

ಮಣಿಪಾಲ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್‌ಸ್‌ ಲಿ. ಹೆಸರನ್ನು ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಎಂದು ಬದಲಾಯಿಸಲಾಯಿತು. ಇದರ ಅಧೀನದಲ್ಲಿ ಮಣಿಪಾಲ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮುಂಬಯಿಯಿಂದ ಮುದ್ರಣಗೊಳ್ಳುವ ಉದಯವಾಣಿ, ತರಂಗ ವಾರಪತ್ರಿಕೆ, ರೂಪತಾರ ಚಲನಚಿತ್ರ ಮಾಸ ಪತ್ರಿಕೆ, ತುಷಾರ ಮಾಸಿಕ ಡೈಜೆಸ್‌ಟ್‌ ಮುದ್ರಣಗೊಂಡು ಓದುಗರನ್ನು ಸೆಳೆಯುತ್ತಿದೆ.

See also  ನವದೆಹಲಿ: ಮಂಕಿಪಾಕ್ಸ್‌ ತಡೆಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಗೌರವ
ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಿಕಾರಂಗದ ಕ್ಷೇತ್ರಕ್ಕಾಗಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್‌ಸ್‌ ಲಿ. ಗೆ ಕೊಡಮಾಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈಯವರು ಸ್ವೀಕರಿಸಿದ್ದರು. ಪೈಯವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದರು.

ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈಯವರು 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ಚೆಯರ್‌ಮ್ಯಾಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾಗಿ ಇದೇ ವೇಳೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಶೋಧನ ಕೇಂದ್ರ, ಎಂಜಿಎಂ ಯಕ್ಷಗಾನ ಕೇಂದ್ರದ ಅಧ್ಯಕ್ಷರಾಗಿಯೂ ಈ ಸಂಸ್ಥೆೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಪ್ರೀತಿ
ಡಾ. ಟಿ.ಎಂ.ಎ ಪೈಯವರು ಉಪಯೋಗಿಸುತ್ತಿದ್ದ ಪರಿಕರಗಳನ್ನು ಮಣಿಪಾಲದ ‘ಸ್ಮೃತಿ ಭವನ’ದಲ್ಲಿ (ಮ್ಯೂಸಿಯಂ) ಕಾಪಿಡಲು ವಿಶೇಷ ಶ್ರಮ ವಹಿಸಿದ್ದರು. ವಿವಿಧ ರೀತಿಗಳ ಕಲೆಗಳಲ್ಲಿ ಅತ್ಯಾಸಕ್ತರಾಗಿದ್ದ ಮೋಹನದಾಸ್ ಪೈಯವರು ತಮ್ಮ ಆಸಕ್ತಿಯನ್ನು ಮಣಿಪಾಲದ ವಿಜಯನಾಥ ಶೆಣೈಯವರೊಡಗೂಡಿ ಬಹುಮುಖದ ಸಾಂಸ್ಕೃತಿಕ ತಾಣವೆನಿಸಿದ ಹೆರಿಟೇಜ್ ವಿಲೇಜ್ ರೂಪಿಸುವಲ್ಲಿ ಯೋಗದಾನ ಮಾಡಿದ್ದಾರೆ.

ಸಾರ್ವಜನಿಕ ರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಪೈಯವರು ತಂದೆಯ ಮಾದರಿಯಲ್ಲಿ ಆಧುನಿಕ ಕರ್ನಾಟಕದ ಶಿಲ್ಪಿ ಎನಿಸಿಕೊಂಡಿದ್ದಾರೆ. ಪತ್ರಿಕೋದ್ಯಮದ ಮೂಲಕ ಕರಾವಳಿ ಕರ್ನಾಟಕದ ಅಭಿವೃದ್ಧಿಯಲ್ಲಿ ಇವರಿಗೆ ದೂರದೃಷ್ಟಿ ಇತ್ತು.

ಸಾರ್ವಜನಿಕರ ಅಂತಿಮ ದರ್ಶನ
ಆ. 1ರ ಬೆಳಗ್ಗೆೆ 9ರಿಂದ 11 ಗಂಟೆವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆೆ ಅವಕಾಶ ಕಲ್ಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು