ಉಡುಪಿ: ಮುಂದಿನ ದಿನಗಳಲ್ಲಿ ಮೀನುಗಾರರು ಬಳಸುವ ಸೀಮೆಎಣ್ಣೆ ಮೋಟರುಗಳ ದೋಣಿಗಳನ್ನು ಪೆಟ್ರೋಲ್ ಮೋಟರ್ ದೋಣಿಗಳಿಗೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಹಾಯ ಧನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಭಾರತೀಯ ಜನತಾ ಪಕ್ಷದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ :
ಮೀನುಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುವುದು.ಕರಾವಳಿ ಭಾಗದಲ್ಲಿ ಬೆಳೆದ ಕುಚಲಕ್ಕಿಯನ್ನು ಖರೀದಿಸಿ ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ ಚಟುವಟಿಕೆಗಳಿಗೆ 8 ಮೀನುಗಾರ ಬಂದರುಗಳನ್ನು ಅಭಿವೃದ್ಧಿಪಡಿಸಲು ಆಯವ್ಯಯದಲ್ಲಿ ಅನುದಾನ ಕಲ್ಪಿಸಲಾಗಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ. ಈ ವರ್ಷ 100 ಹೈ ಸ್ಪೀಡ್ ದೋಣಿಗಳನ್ನು ನೀಡಲು ಕ್ರಮವಹಿಸಲಾಗಿದ್ದು, ಅದರಲ್ಲಿ ಶೇ 40% ರಷ್ಟು ಸಬ್ಸಿಡಿ ವ್ಯವಸ್ಥೆಯಿದೆ. ಈ ಯೋಜನೆಗೆ ಜನರ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ವರ್ಷದಿಂದ ಹೈಸ್ಪೀಡ್ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಮಂಗಳೂರು ಹಾಗೂ ಕಾರವಾರ ಬಂದರು ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಕರಾವಳಿ ಬಂದರು ಅಭಿವೃದ್ಧಿ ಗೆ ಕೇಂದ್ರದ 1774 ಕೋಟಿ ರೂ.:
ವಿಶ್ವಗುರು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕೊವಿಡ್ ನಂತರ ಇಡಿ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿದೆ ಭಾರತ ಮಾತ್ರ ಶೇ 7% ರಷ್ಡು ಪ್ರಗತಿ ಸಾಧಿಸುತ್ತಿದೆ. ಆರ್ಥಿಕ ಚೇತರಿಕೆಯನ್ನು ಸಮರ್ಥವಾಗಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಸಾಗರ ಮಾಲಾ ಯೊಜನೆ ಅಡಿಯಲ್ಲಿ ಕರಾವಳಿ ಬಂದರು ಅಭಿವೃದ್ಧಿ ಗೆ 1774 ಕೋಟಿ ರೂ. ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ದಿಗೆ ಸಿಆರ್ ಝಡ್ ನಿಯಮಗಳಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಇಡೀ ದೇಶದಲ್ಲಿ ರಾಜ್ಯದ ಕಡಲು ತೀರದ ಅಭಿವೃದ್ದಿ, ಉದ್ಯೋಗ,ಆರ್ಥಿಕತೆ ಮತ್ತು ಹೆಚ್ಚಿನ ಮಟ್ಟದ ವ್ಯಾಪಾರ ವಹಿವಾಟು ಕರ್ನಾಟಕದ ಕರಾವಳಿ ಭಾಗದಲ್ಲಿ ಆಗಲಿದೆ ಎಂದು.
ಕರಾವಳಿ ಜಿಲ್ಲೆಗಳಲ್ಲಿ 2 ಲಕ್ಚ ಕೋಟಿ ಬಂಡವಾಳ ಹೂಡಿಕೆಯಾಗಲಿದೆ :
ಕರಾವಳಿ ಜಿಲ್ಲೆಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಚ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಪ್ರಧಾನ ಮಂತ್ರಿಯವರು ನಾಡಿದ್ದು ಬೆಂಗಳೂರಿಗೆ ಆಗಮಿಸಿ ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ. ಕೊಂಕಣ ರೈಲಿನ ವಿದ್ಯುದೀಕರಣ ಯೋಜನೆ ರಾಜ್ಯವನ್ನು ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸಲಿದೆ. ಮಂಗಳೂರು, ಕಾರವಾರ ಬಂದರುಗಳನ್ನು ಪ್ರಮುಖ ನಗರಗಳಿಗೆ ಜೋಡಿಸುವ ಗತಿ ಶಕ್ತಿ ಯೋಜನೆ ಕೈಗೊಳ್ಳಲಾಗುತ್ತಿದೆ . ಪ್ರಧಾನಿ ಮೋದಿಯವರು 5 ಬಿಲಿಯನ್ ಡಾಲರ್ ಆರ್ಥಿಕತೆಯ ಕನಸು ಹೊಂದಿದ್ದು, ಅದರಲ್ಲಿ ಕರ್ನಾಟಕ ರಾಜ್ಯ 1 ಲಕ್ಷ ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇದೆ ಎಂದರು.
ಮೀನುಗಾರರ 5000 ಮನೆಗಳಿಗೆ ಮಂಜೂರಾತಿ :
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲಾಗುತ್ತಿದೆ. ನಮ್ಮದು ಡಬಲ್ ಇಂಜನ್ ಸರ್ಕಾರ, ಈ ಸರ್ಕಾರ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ. ಕೇಂದ್ರದಲ್ಲಿ ಮೋದಿ ನಾಯಕತ್ವ ಹಾಗು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ವಿಶ್ವಾಸ ಇದೆ ಎಂದರು. ರೈತರಿಗೆ ಕೃಷಿ ಚಟುವಟಿಕೆಗೆ ಡೀಸೆಲ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ,ವಿದ್ಯಾನಿಧಿ ಯೋಜನೆಯನ್ನು ರೈತರ, ರೈತ ಕೂಲಿಕಾರರ, ನೇಕಾರರ, ಟ್ಯಾಕ್ಸಿ ಅಟೋಚಾಲಕರ ಮಕ್ಕಳಿಗೆ ನೀಡಲಾಗುತ್ತಿದೆ. ವಿದ್ಯಾನಿಧಿ ಯೋಜನೆ ಮೂಲಕ 2. ಲಕ್ಷ ಮೀನುಗಾರರ ಮಕ್ಕಳಿಗೆ, _20 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದೇವೆ. ಮೀನುಗಾರರ 5000 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು.
ಒಡೆದು ಆಳುವ ನೀತಿಯನ್ನು ಅನುಸರಿಸುವ ಕಾಂಗ್ರೆಸ್ ಪಕ್ಷ :
ಕಾಂಗ್ರೆಸ್ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಬರಿ ಭಾಷಣದ ಸರಕು ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರು ಕಾಂಗ್ರೆಸ್ ನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಈಗಿರುವ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರ ಉಳಿಸಿಕೊಳ್ಳಲಿ. ಅಲ್ಪಸಂಖ್ಯಾತರಿಗೂ ಮೋಸ ಮಾಡುವ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಒಡೆದು ಆಳುವ ನೀತಿಯನ್ನು ಅನುಸರಿಸುವ ಕಾಂಗ್ರೆಸ್ ಗೆ ಜನ ತಕ್ಕ ಪಾಠವನ್ನು ಕಲಿಸಿದ್ದಾರೆ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಧೈರ್ಯ ಕಾಂಗ್ರೆಸ್ ನಾಯಕರಿಗಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಸಾಕಷ್ಡು ಆಗಿದೆ.ಹಾಸ್ಟೆಲ್ ಕಟ್ಟಡ, ದಿಂಬು ಹಾಸಿಗೆಯಲ್ಲಿ ಭ್ರಷ್ಟಾಚಾರ, ಅನ್ನಭಾಗ್ಯದ ಅನ್ನದಲ್ಲಿ ಭ್ರಷ್ಟಾಚಾರ, ಸೋಲಾರ ಯೋಜನೆಯಲ್ಲಿ ಭ್ರಷ್ಟಾಚಾರ, ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಮಾಡಿದ್ದಾರೆ. ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದ ಬೇಡಿಕೆ 50 ವರ್ಷದಿಂದ ಇತ್ತು. ಈ ಬಗ್ಗೆ ದಿಟ್ಟತನದ ನಿ ರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಅವರಿಗೆ ಧಂ ಇರಲಿಲ್ಲ.ಎಸ್ಸಿ ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ವಿರೋಧ ಮಾಡಿದ್ದಾರೆ ಎಂದರು.
ಮೇಲ್ವರ್ಗದ ಬಡವರಿಗೂ ಶೆ 10ರಷ್ಟು ಮೀಸಲಾತಿ :
ನಮ್ಮ ಸರ್ಕಾರ ಎಸ್ ಸಿ ಎಸ್ ಟಿ ಜನರಿಗೆ ಸ್ವಾವಲಂಬನೆಯ ಬದುಕು ನೀಡಲು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ನೀಡುತ್ತಿದ್ದೇವೆ. ಇಂದು ಸುಪ್ರೀಂ ಕೋರ್ಟ್ ನಮ್ಮ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದ ಬಡವರಿಗೂ ಶೆ 10ರಷ್ಟು ಮೀಸಲಾತಿ ನೀಡುವ ತೀರ್ಮಾನವನ್ನು ಎತ್ತಿ ಹಿಡಿದಿದೆ. ಈ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ. ಅಭಿವೃದ್ಧಿಯಲ್ಲಿ ಎಲ್ಲರ ಪಾಲು ಇರಲಿದೆ. ಕರಾವಳಿ ಭಾಗದ ಜನರು ಜನಸಂಕಲ್ಪ ಯಾತ್ರೆಯನ್ನು ಅಭೂತಪೂರ್ವ ವಾಗಿ ಯಶಸ್ವಿಗೊಳಿಸಿ, ಭಾರತೀಯ ಜನತಾ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ 2023 ರಲ್ಲಿ ನಿಮ್ಮ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ವಿ. ಸುನಿಲ್ ಕುಮಾರ್, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತಿತರರು ಹಾಜರಿದ್ದರು.