ಉಡುಪಿ: 2024ರ ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯದ ಅಂಗವಾಗಿ ಇಂದು ಅದ್ಧೂರಿಯಾಗಿ ಬಾಳೆ ಮುಹೂರ್ತ ನೆರವೇರಿಸಲಾಯಿತು.
ಶ್ರೀಕೃಷ್ಣ ಮಠಗಳ ರಥಬೀದಿಯಲ್ಲಿ ಭಕ್ತರು ಬಾಳೆಗಿಡಗಳನ್ನು ಹೊತ್ತು ಮರೆವಣಿಗೆಯಲ್ಲಿ ಸಾಗಿ ಕೃಷ್ಣ ಮುಖ್ಯಪ್ರಾಣನ ಜೊತೆಗೆ ಅನಂತೇಶ್ವರ, ಚಂದ್ರ ಮೌಳೀಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಬಾಳೆ ಮೂಹೂರ್ತಕ್ಕೆ ಚಾಲನೆ ನೀಡಲಾಯಿತು. ದೇವರ ಪ್ರಸಾದದೊಂದಿಗೆ ಪುತ್ತಿಗೆ ಮಠಕ್ಕೆ ಆಗಮಿಸಿ ವಾದ್ಯ-ವೇದ-ಮಂಗಳ ಘೋಷಗಳೊಂದಿಗೆ ಬಾಳೆಗಿಡ, ತುಳಸೀ ಗಿಡ, ಕಬ್ಬು ಮೊದಲಾದ ಸಸ್ಯ ಸಂಪತ್ತನ್ನು ಮೆರವಣಿಗೆಯ ಮೂಲಕ ನಿಗದಿತ ಸ್ಥಳಕ್ಕೆ ಕೊಂಡೊಯ್ದು ಬಾಳೆ ಗಿಡಗಳನ್ನು ನೆಡಲಾಯಿತು. ಹೀಗೆ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ಬೇಕಾಗುವ ಬಾಳೆ ಎಲೆಗಾಗಿ ಗಿಡಗಳನ್ನು, ಅರ್ಚನೆಗಾಗಿ ತುಳಸೀ ಗಿಡಗಳನ್ನು ನೆಡುವ ಮೂಲಕ ಮೊದಲ ಮುಹೂರ್ತ ಸಂಪನ್ನಗೊಂಡಿತು.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬಳಿಕ ಮಾತನಾಡಿದ ಪುತ್ತಿಗೆ ಶ್ರೀಗಳು, ಮುಂಬರುವ ಪರ್ಯಾಯಕ್ಕೆ ಪಂಚ ಯೋಜನೆಯನ್ನು ಘೋಷಣೆ ಮಾಡಿದರು. ವಿಶ್ವಗೀತಾ ಪರ್ಯಾಯ (ಕೋಟಿ ಗೀತಾ ಗಾಯನ ಮಾಡುವ ಸಂಕಲ್ಪ), ಅನ್ನಬ್ರಹ್ಮ ಸೇವೆ (ನಿರಂತರ ಅನ್ನದಾನ ಜೊತೆಗೆ ಜ್ಞಾನದಾನ), ಕ್ಷೇತ್ರಾವಾಸ (ನೂರಾರು ಕೋಣೆಯ ವಸತಿ ಗೃಹ ನಿರ್ಮಾಣ), ಪಾರ್ಥಸಾರಥಿ ರಥ ಸಮರ್ಪಣೆ (ಸನ್ಯಾಸ ದೀಕ್ಷೆ ಸ್ವೀಕರಿಸಿ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಣೆ), ಮಧ್ವವೃತ್ತ ನಿರ್ಮಾಣ (ಕಲ್ಸಂಕದಲ್ಲಿ ಮಧ್ವಾಚಾರ್ಯರ ಪ್ರತಿಮೆ ನಿರ್ಮಾಣ) ಹಾಗೂ ಸಮಗ್ರಗೀತೆಯ ಯಾಗ (ಭಗವದ್ಗೀತೆಯನ್ನು ವಿಶ್ವಕ್ಕೆ ಪ್ರಚಾರ ಪಡಿಸುವುದು) ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಕೃಷ್ಣ ಆರಾಧನೆ ಎಲ್ಲರೂ ಸೇರಿ ಮಾಡಬೇಕು. ಇದರಿಂದ ಉತ್ತಮ ಮಳೆ ಬೆಳೆ ಆಗಿ ಸಮೃದ್ಧಿ ನೆಲೆಸುತ್ತದೆ. ದೇವರನ್ನು ಯಾವ ರೀತಿ ಪೂಜೆ ಮಾಡುತ್ತೇವೆ. ಅದೇ ರೀತಿಯ ಅನುಗ್ರಹ ನಮಗೆ ಸಿಗುತ್ತದೆ. ದೇವರನ್ನು ಅನ್ನಬ್ರಹ್ಮ, ಕಾಂಚಾನ ಬ್ರಹ್ಮ, ನಾದಬ್ರಹ್ಮ ಉಪಾಸನ ಮಾಡಬೇಕು. ಉಡುಪಿ ಶ್ರೀಕೃಷ್ಣನನ್ನು ಅನ್ನಬ್ರಹ್ಮ ಮೂಲಕ ಉಪಾಸನ ಮಾಡಿದರೆ, ಲೋಕವೇ ಸುಭಿಕ್ಷೆಯಿಂದ ಇರುತ್ತದೆ
ಉಡುಪಿ ಶ್ರೀಕೃಷ್ಣ ತಿನ್ನುವ ಕೃಷ್ಣನಾಗಿ ಒಳಿದಿದ್ದು, ಹಾಗಾಗಿ ಉಡುಪಿಯಲ್ಲಿ ಅನ್ನದಾನ ಎಂಬುವುದು ವಿಶೇಷ ಸೇವೆ. ಅದರ ಪ್ರತ್ಯಕ್ಷ ದರ್ಶನ ಉಡುಪಿಯ ಹೋಟೆಲ್ ಗಳು ಎಂದರು.
ಮೇ 25ರಂದು ಅಕ್ಕಿ ಮುಹೂರ್ತ ನೆರವೇರಲಿದೆ. ಆ ಬಳಿಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. 2024ರ ಜ.3ರಂದು ಪುರಪ್ರವೇಶ ಮಾಡಲಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ್, ಎಂ.ಬಿ. ಪುರಾಣಿಕ್, ಗುರ್ಮೆ ಸುರೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಮಿತ್ರಾ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಯಶ್ ಪಾಲ್ ಸುವರ್ಣ ಮೊದಲಾದವರು ಭಾಗವಹಿಸಿದ್ದರು.