ಉಡುಪಿ: ನಾಡದೋಣಿ ಮೀನುಗಾರರಿಗೆ ಸಮರ್ಪಕವಾಗಿ ಸೀಮೆಎಣ್ಣೆ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಕ್ಕೋತ್ತಾಯ ಆಂದೋಲನ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಅವರು, ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳ ನಾಡದೋಣಿ ಮೀನುಗಾರರಿಗೆ ಕೇಂದ್ರ ಸರ್ಕಾರವು ನ.2ರಂದು 3000 ಕೆಎಲ್ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿದೆ. ಆದರೆ ಇದುವರೆಗೂ ಮೀನುಗಾರರಿಗೆ ಸರಿಯಾಗಿ ಸೀಮೆಎಣ್ಣೆ ಹಂಚಿಕೆ ಆಗಿಲ್ಲ. ಮುಂದಿನ 15 ದಿನಗಳೊಳಗೆ ಎಲ್ಲ ನಾಡದೋಣಿಗಳಿಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಸಮುದ್ರದಲ್ಲಿ ಸಾಕಷ್ಟು ಮೀನು ಸಿಗುತ್ತಿದ್ದರೂ, ಮೀನುಗಾರಿಕೆ ಮಾಡಲು ಸೀಮೆಎಣ್ಣೆ ಸಿಗುತ್ತಿಲ್ಲ. ಇದರಿಂದ ಮೀನುಗಾರರ ಬದುಕು ದುಸ್ತರವಾಗಿದೆ. ಹಾಗಾಗಿ ಸಮರ್ಪಕ ಸೀಮೆಎಣ್ಣೆ ಪೂರೈಕೆಗೆ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸೀಮೆಎಣ್ಣೆ ಸಮಪರ್ಕವಾಗಿ ಸಿಗದಿದ್ದರೆ ಈ ಹೋರಾಟವನ್ನು ಆಂದೋಲನ ರೀತಿಯಲ್ಲಿ ಮಾಡಬೇಕು ಎಂದರು.
ಪ್ರತಿಭಟನೆ ಬಳಿಕ ಬೇಡಿಕೆಗಳ ಹಕ್ಕೋತ್ತಾಯ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಮನವಿಯನ್ನು ಅಪರ ಜಿಲ್ಲಾಧಿಕಾರಿ ವೀಣಾ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರ್ನಾಟಕ ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ಬೈಂದೂರು ವಲಯ ಸಂಘದ ಮಾಜಿ ಅಧ್ಯಕ್ಷ ರಾಮ ಚಂದ್ರ ಖಾರ್ವಿ, ವಲಯ ಗೌರವಾಧ್ಯಕ್ಷ ಮದನ್ ಕುಮಾರ್, ಮುಖಂಡರಾದ ಪುರಂದರ ಕೋಟ್ಯಾನ್, ಮುಹಮ್ಮದ್ ಅಝೀಝ್, ಯಶವಂತ್ ಖಾರ್ವಿ, ನಗರಸಭೆ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.