ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯದ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.
ನೂತನ ಪಂಚಾಯತ್ ಕಟ್ಟಡ ಉದ್ಘಾಟಿಸಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಅಲೆವೂರಿನ ಪ್ರಗತಿನಗರ ಹಾಗೂ ಪೆರ್ಡೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಂದ ತಯಾರಿಸಲ್ಪಡುವ ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ತಲಾ 30 ಕೋ. ರೂ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ ಎಂದರು.
ಅಲೆವೂರಿನಲ್ಲಿ 8ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಾಗೆಯೇ ಅಲೆವೂರು ಪಂಚಾಯತ್ ವ್ಯಾಪ್ತಿಯ ಮನೆ ನಿವೇಶನಕ್ಕೆ ರಹಿತರಿಗೆ ಲೇಔಟ್ ನಿರ್ಮಿಸಿ ವ್ಯವಸ್ಥಿತವಾದ ಮನೆ ನಿವೇಶ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪುಷ್ಪ ಅಂಚನ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ವ್ಯವಸ್ಥಿತ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರಂತರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಸುಧಾಕರ್ ಪೂಜಾರಿ, ಪಿಡಿಒ ದಯಾನಂದ್ ಬೆಣ್ಣೂರ, ಸಹಾಯಕ ಎಂಜಿನಿಯರ್ ಬರಮ್ಮ ಮಾಳಿ, ಕಡೆಕಾರು ಪಿಡಿಒ ಸಿದ್ದೇಶ್, ಎಂಜಿನಿಯರ್ ಶ್ರೀನಾಥ್ ನಾಯಕ್, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.