ಕುಂದಾಪುರ: ವಂಡ್ಸೆ ಹೋಬಳಿಯ ಶಂಕರನಾರಾಯಣ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿ ಇಂದು ಎರಡು ಕಡೆಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಾರಾಹಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಅವರ ಮಾರ್ಗದರ್ಶನದಲ್ಲಿ ಇಂದು ಮುಂಜಾನೆ ಭೂವಿಜ್ಞಾನಿ ಸಂಧ್ಯಾ ಅವರು ಶಂಕರನಾರಾಯಣ ಗ್ರಾಮದ ಕೈಯಾಣಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಮರಳು ದಕ್ಕೆಯಲ್ಲಿ ಮರಳು ತುಂಬಿ ನಿಂತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಶಂಕರನಾರಾಯಣ – ಹಾಲಾಡಿ ರಸ್ತೆಯಲ್ಲಿ ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಒಂದು ಟಿಪ್ಪರ್ ಅನ್ನು ವಶಕ್ಕೆ ಪಡೆದಿದ್ದಾರೆ. ಕೈಯಾಣಿ ಪರಿಸರದಲ್ಲಿನ ಅನಧಿಕೃತ ಮರಳು ದಕ್ಕೆಗೆ ದಾಳಿಯಾಗುತ್ತಿದ್ದಂತೆ, ಶಂಕರನಾರಾಯಣ ವ್ಯಾಪ್ತಿಯ ಭರತ್ಕಲ್, ಕ್ರೊಡ ಬೈಲೂರು ಹಾಗೂ ಮಚ್ಚಟ್ಟು ಗ್ರಾಮದ ಹೆಮ್ಮಣ್ಣು, ಕಳಿನಜೆಡ್ಡು ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆಯನ್ನು ನಡೆಸುತ್ತಿದ್ದವರು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಅನಧಿಕೃತ ಮರಳು ಗಣಿಗಾರಿಕೆಗೆ ದಕ್ಕೆ ಹಾಗೂ ಸಾಗಾಣಿಕೆಗೆ ರಸ್ತೆಯನ್ನು ಕೆಲವು ಖಾಸಗಿ (ಪಟ್ಟಾ) ಜಾಗಗಳಲ್ಲಿ ನೀಡಿರುವುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದ್ದು, ಅಂತಹ ಜಾಗದ ಪಟ್ಟಾದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭೂವಿಜ್ಞಾನಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 2 ಲಾರಿಗಳನ್ನು 20 ಮೆಟ್ರಿಕ್ ಟನ್ ಮರಳು ಸಹಿತ ಶಂಕರನಾರಾಯಣ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ.