News Kannada
Friday, February 03 2023

ಉಡುಪಿ

ಉಡುಪಿಯಲ್ಲಿ ಅಂತರಾಷ್ಟ್ರೀಯ ಆದಿಮಕಲೆಯ ಹಬ್ಬ

International Adimakale Festival in Udupi
Photo Credit : News Kannada

ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ಇಡೂರು-ಕುಂಜ್ಙಾಡಿ ಗ್ರಾಮ ಪಂಚಾಯತಿಯ ಜನ್ನಾಲ್‌ನ ಅವಲಕ್ಕಿ ಪಾರೆ, ಆದಿಮ ಕಲೆಯ ನಿವೇಶನದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಆದಿಮ ಕಲೆಯ ಹಬ್ಬವನ್ನು ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯದ ಅನುವಂಶಿಕ ಮೊಕ್ತೇಸರರಾದ ಶ್ರೀ ಸದಾಶಿವ ಶೆಟ್ಟಿಯವರು ಉದ್ಘಾಟಿಸಿ, ಶುಭಾಷಯವನ್ನು ಕೋರಿದರು.

ಎರಡು ದಿನಗಳ ಈ ರಾಷ್ಟ್ರೀಯ ಕಾರ್ಯಕ್ರಮದ ಸರ್ವಾಧ್ಯಕ್ಷ ಆಸ್ಟ್ರೀಯಾದ ಖ್ಯಾತ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್ ರವರು ಮಾತನಾಡುತ್ತಾ ಭಾರತದ ಪಶ್ಚಿಮ ಕರಾವಳಿಯಲ್ಲಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಹಳೇ ಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗದ ಶಿಲಾಯುಧಗಳು ಕಂಡು ಬಂದಿದ್ದರೂ ಯಾಕೆ ಆದಿಮ ಕಲೆಯ ನಿವೇಶನಗಳು ದೊರೆತಿಲ್ಲವೆಂಬುದು ಆದಿಮ ಕಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಕೌತುಕದ ಪ್ರಶ್ನೆಯಾಗಿತ್ತು. ಆದರೆ, ಅನೇಕ ಸಂಶೋಧಕರ ಸತತ ಪ್ರಯತ್ನಗಳಿಂದಾಗಿ ಕರಾವಳಿಯ ಮುರಕಲ್ಲಿನ ಭೂಹಾಸಿನ ಮೇಲೆ ನೂರಾರು ಆದಿಮ ಚಿತ್ರಗಳು ಇರುವ ನಿವೇಶನಗಳು ಅವುಗಳ ಚಿತ್ರಗಳೊಂದಿಗೆ ಸಂಶೋಧಿಸಿ ಪ್ರಕಟಿಸಿದರೂ ಭಾರತದ ಪುರಾತತ್ವ ಇಲಾಖೆಯ ಅಧಿಕಾರಿಗಳು ಅವುಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡದಿರುವುದು ಅತ್ಯಂತ ಲಜ್ಜೆಗೇಡಿನ ಸಂಗತಿಯಾಗಿದೆ.

ತೀರಾ ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಈ ಸಂಶೋಧನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಅಧ್ಯಯನಕ್ಕೆ ಅಗತ್ಯವಾದ ಅನುದಾನವನ್ನು ಬಿಡುಗಡೆಗೊಳಿಸಿ ಅವುಗಳ ಸಂರಕ್ಷಣೆಗೆ ಮುಂದಾಗಿದೆ. ದೇಶದ ಯಾವುದೋ ಮೂಲೆಯಲ್ಲಿ ಒಂದು ಕುಗ್ರಾಮದಲ್ಲಿರುವ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು, ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳಿಗೆ ನೀಡಿರುವ ಮತ್ತು ನೀಡುತ್ತಿರುವ ಬೆಂಬಲ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಬಳ್ಳಾರಿಯ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದ ಗೌರವ ನಿರ್ದೇಶಕರಾದ ಡಾ. ರವಿಕೋರಿಶೆಟ್ಟರವರು ಮಾತನಾಡುತ್ತಾ ಅವಲಕ್ಕಿ ಪಾರೆಯಂತಹ ವನ್ಯಜೀವಿ ರಕ್ಷಿತಾರಣ್ಯದ ಒಳಗೆ ಪುರಾತನ ಚಿತ್ರಗಳು ಇರುವ ನಿವೇಶನದಲ್ಲಿ ಕಲಾವಿದರು, ಕಲಾ ಇತಿಹಾಸಕಾರರು, ಪುರಾತತ್ವಶಾಸ್ತ್ರ ವಿದ್ವಾಂಸರು ಹಾಗೂ ಸಾರ್ವಜನಿಕರ ಸಮಾವೇಶದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮ ಇಡೀ ದೇಶದಲ್ಲಿಯೇ ಮೊದಲನೆಯದು ಹಾಗೂ ಅಪೂರ್ವವಾದದ್ದು. ವಿದ್ವತ್ ಸಮಾವೇಶಗಳು ಕೇವಲ ಪಂಡಿತರ ಚರ್ಚೆಗೆ ಸೀಮಿತವಾಗಿ ಬಿಡುತ್ತವೆ. ಯಾವುದೇ ಸಂಶೋಧನೆಗಳು ಸಾರ್ವಜನಿಕರಿಗೆ ಉತ್ತರದಾಯಿಯಾಗಬೇಕಾದರೆ ಇಂತಹ ಹಬ್ಬಗಳು ನಿರಂತರವಾಗಬೇಕು ಎಂದು ನುಡಿದರು.

ತುಳುನಾಡಿನ ಪ್ರಾಗೈತಿಹಾಸಕ್ಕೆ ಸಂಬಂಧಿಸಿದ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿಯವರು ನಮ್ಮ ಕಾಲೇಜಿನ ಪುರಾತತ್ವಶಾಸ್ತ್ರ ವಿಭಾಗವು ಅನೇಕ ದಶಕಗಳಿಂದ ಪುರಾತತ್ವ ಸಂಶೋಧನೆ ಮತ್ತು ಪರಂಪರೆಯ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ಕ್ರಿಯಾಶೀಲವಾಗಿದೆ ಎಂದು ನುಡಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ ಅವಲಕ್ಕಿ ಪಾರೆಯ ಪುರಾತನ ಚಿತ್ರಗಳು ನಮ್ಮ ದೇಶದ ಶ್ರೀಮಂತ ಪರಂಪರೆಯ ಪಳೆಯುಳಿಕೆಗಳಾಗಿದ್ದು ಅವುಗಳನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಉಳಿಸಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆಯೆಂದು ನುಡಿದರು.

See also  ಕಾರವಾರ: ನರೇಗಾ ಯೋಜನೆ ಅಡಿ ಅವ್ಯವಹಾರ- ಕ್ರಮಕ್ಕೆ ಆಗ್ರಹ

ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರ ಸಂಘ (ಮಾನುಷ)ದ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿಗಾರ್ ರವರು ತುಳುನಾಡಿನ ಪ್ರಾಗೈತಿಹಾಸಕ್ಕೆ ಸಂಬಂಧಿಸಿದ ಕನ್ನಡದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇಡೂರು-ಕುಂಜ್ಙಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಅಮೀನ್ ಶೆಟ್ಟಿಯವರು ಹಿತ್ತಲಗಿಡ ಮದ್ದಲ್ಲ ಎಂಬ ನಾಣ್ಣುಡಿಯಂತೆ ನಮ್ಮ ಊರಿನಲ್ಲಿಯೇ ಇರುವ ಪುರಾತನ ಚಿತ್ರಗಳ ಮಹತ್ವ ನಮಗೆ ಈ ಕಾರ್ಯಕ್ರಮದ ಮೂಲಕ ಅರಿವಾಗಿದೆ ಅದರ ರಕ್ಷಣೆಗೆ ನಾವು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ನುಡಿದರು. ಸಂಘಟನಾ ಕಾರ್ಯದರ್ಶಿ ಪ್ರೊ.ಟಿ.ಮುರುಗೇಶಿಯವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ನಯನ ಎಂ ಪಕ್ಕಳ ಸ್ವಾಗತಿಸಿದರು, ವಿದ್ಯಾರ್ಥಿ ನಾಯಕ ವೈಶಾಖ್ ಹೆಬ್ಬಾರ್ ಧನ್ಯವಾದ ಸಮರ್ಪಿಸಿದರು, ಕು. ಸಂಧ್ಯಾ ಮತ್ತು ಮಾನಸ ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ, ಡಾ. ರವಿಕೋರಿಶೆಟ್ಟರ್ ರವರು ದಿಕ್ಸೂಚಿ ಭಾಷಣವನ್ನು ಮಾಡಿದರು, ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಮೋಹನ್ ಆರ್ ರವರು ಡಾ. ಅ. ಸುಂದರ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ನಡೆದ ಶೈಕ್ಷಣಿಕ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಕೊಟ್ಟಾಯಂ ನ ಮಹತ್ಮಾಗಾಂಧಿ ವಿಶ್ವವಿದ್ಯಾಲಯದ ಜಾರ್ಜ್ ವರ್ಗಿಸ್, ಹಂಪಿ ವಿಶ್ವವಿದ್ಯಾನಿಲಯದ ರೇಣುಕಾಸ್ವಾಮಿ ಒಡೆಯರ್, ದಾವಣಗೆರೆ ವಿಶ್ವವಿದ್ಯಾಲಯದ ಯಶವಂತ ಬಿ., ರವರು ಪ್ರಬಂಧಗಳನ್ನು ಮಂಡಿಸಿದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಹಿಂದೂಸ್ತಾನಿ ಗಾಯಕ ಡಾ. ಮಿಥುನ್ ಚಕ್ರವರ್ತಿ, ಕು. ಮಾನಸ ಮತ್ತು ಕು. ಅಪ್ಸಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಎರಡನೇ ದಿನ, ರಾಜ್ಯದ ಹೆಸರಾಂತ ಕಲಾವಿದರಾದ, ಸುನಿಲ್ ಮಿಶ್ರಾ ಮತ್ತು ಲಕ್ಷಣ್ ರವರ ತಂಡ ವಿಭಿನ್ನ ಮಾಧ್ಯಮಗಳಲ್ಲಿ ಅವಲಕ್ಕಿ ಪಾರೆಯ ಆದಿಮ ಚಿತ್ರಗಳನ್ನು ಪುನರ್ ಸೃಷ್ಠಿ ಮಾಡಿದರು. ನಂತರ ನಡೆದ ಶೈಕ್ಷಣಿಕ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಪ್ರೊ. ಟಿ. ಮುರುಗೇಶಿ, ಶಿರ್ವ ಕಾಲೇಜಿನ ದಿಶಾಂತ್, ವಿಶಾಲ್ ರೈ, ಬೆಂಗಳೂರಿನ ಡಾ. ಗೀತಾ ಬಡಕಿಲ್ಲಾಯ ಪ್ರಬಂಧಗಳನ್ನು ಮಂಡಿಸಿದರು.

ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಪ್ರೊ. ಟಿ. ಮುರುಗೇಶಿಯವರು, ಅವಲಕ್ಕಿ ಪಾರೆಯ ಮಾರ್ಗಸೂಚಿ ನಾಮಫಲಕಗಳನ್ನು ಅನಾವರಣ ಮಾಡಿದರು. ನಂತರ ಸಮಾರೋಪ ಸಮಾರಂಭದೊಂದಿಗೆ ಕ್ರಾರ್ಯಕ್ರಮ ಮುಕ್ತಾಯವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು