ಉಡುಪಿ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಉಡುಪಿ ಇದರ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಕೂಟವು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿದೆ ಎಂದು ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಹೇಳಿದರು.
ಉಡುಪಿ ಪಿಪಿಸಿ ಕಾಲೇಜಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಸುಮಾರು ನಾಲ್ಕು ವಲಯಗಳಿಂದ ಹದಿನಾರು ತಂಡಗಳು, ಹದಿನಾರು ತಂಡಗಳಿಂದ ಸುಮಾರು ಇನ್ನೂರ ಐವತ್ತು ಕ್ರೀಡಾಪಟುಗಳು, ನಲವತ್ತು ಜನ ಕ್ರೀಡಾತರಬೇತುದಾರರು, ತಂಡದ ಐವತ್ತು ವ್ಯವಸ್ಥಾಪಕರು ಹಾಗೂ ತೀರ್ಪುಗಾರರು ಭಾಗವಹಿಸಲಿದ್ದಾರೆ. ಜನವರಿ 4ರಂದು ಬೆಳಿಗ್ಗೆ 7:30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಜನವರಿ 5ರಂದು ಬೆಳಗ್ಗೆ 10:30ಕ್ಕೆ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಕಿರಿಯ ಈಶಪ್ರಿಯತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾವ್ಯದರ್ಶಿಯಾಗಿರುವ ಡಾ. ಬಲ್ವಿತ್ ಸಿಂಗ್ ಹಾಗೂ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್, ಉಡುಪಿಯ ಶಾಸಕರಾದ ರಘುಪತಿ ಭಟ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿಗಳಾದ ಸಿ.ಎ. ಪ್ರಶಾಂತ್ ಹೊಳ್ಳ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ, ಉಪಸ್ಥಿತರಿರಲಿದ್ಧಾರೆ. ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕಾವ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜ.7ರಂದು ಸಂಜೆ 5:30ಕ್ಕೆ ‘ಪ್ರಜ್ಞಾಗೌರವ’ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಾಷ್ಟ್ರ, ಅಂತರ್ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರನ್ನು ಸನ್ಮಾನಿಸಲಾಗುವು. ಜನವರಿ 8ರಂದು ಸಂಜೆ 7 ಗಂಟೆಗೆ ಅಂತಿಮ ಪಂದ್ಯದ ಮುಕ್ತಾಯವಾದ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ರಾಜ್ಯದ ಕ್ರೀಡಾಸಚಿವ ನಾರಾಯಣ ಗೌಡರು, ಮಾಜಿ ಕ್ರೀಡಾಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮಹಾಬಲೇಶ್ವರ ರಾವ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಪ್ರಾಂಶುಪಾಲ ಡಾ. ರಾಘವೇಂದ್ರ ಎ, ವಾಲಿಬಾಲ್ ಕ್ರೀಡಾಕೂಟದ ಸಂಯೋಜಕ ಸುಕುಮಾರ್ ಉಪಸ್ಥಿತರಿದ್ದರು.