ಉಡುಪಿ: ಇಲ್ಲಿನ ಕೆಎಂ ಮಾರ್ಗದಲ್ಲಿರುವ ಸಂಪೂರ್ಣ ಜೀರ್ಣೋದ್ಧಾರಗೊಂಡಿರುವ ಶ್ರೀ ನಿತ್ಯಾನಂದ ಮಂದಿರ ಮಠದ ನವೀಕೃತ ಮಂದಿರದ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮ ಜ.15 ಮತ್ತು 16 ರಂದು ನಡೆಯಲಿದೆ ಎಂದು ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಕೊಡವೂರು ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಲ್ಲಿ ಪ್ರತಿಷ್ಟಾಪಿಸಲ್ಪಡುವ ನಿತ್ಯಾನಂದ ಸ್ವಾಮಿಗಳ ಪಂಚಲೋಹದ ವಿಗ್ರಹದ ಮೆರವಣಿಗೆಯು ಜ.15ರಂದು ನಡೆಯಲಿದ್ದು, ಜ.16 ರಂದು ನವೀಕೃತ ಮಂದಿರ ಲೋಕರ್ಪಣೆ, ಗರ್ಭ ಗೃಹ ಸಮರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ, ಧಾರ್ಮಿಕ ಸಭೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜ.15 ರಂದು ಗಣೇಶ ಪುರಿಯಿಂದ ಆಗಮಿಸಿರುವ ಶ್ರೀದೇವರ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆಯವರೆಗೆ ವಾಹನ ಜಾಥದ ಮೂಲಕ ತರಲಾಗುವುದು. ಬಳಿಕ ಭವ್ಯ ಶೋಭಾ ಯಾತ್ರೆಯಲ್ಲಿ ಈ ವಿಗ್ರಹವನ್ನು ಮಂದಿರಕ್ಕೆ ತಂದು ವೇದಮೂರ್ತಿ ಹಯಗ್ರೀವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂದಿರದ ವಿಶ್ವಸ್ಥರಾದ ಮೋಹನ್ ನಂಬಿಯಾರ್, ಗೌರವಾಧ್ಯಕ್ಷ ಎ. ಪಿ. ಗಿರೀಶ್, ಎಂ ಎಂ ಪಡಿಯಾರ್, ಡಾ. ರಘುವೀರ್ ಪೈ, ಸಂಚಾಲಕ ಶಶಿ ಕುಮಾರ್ ಶೆಟ್ಟಿ ಗೋವಾ, ಮಹಾಬಲ ಕುಂದರ್, ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.