ಕುಂದಾಪುರ: ಕೆಎಸ್‍ಎಂಸಿಎಲ್ ರವರ ನಿಗಾವಣೆಯಲ್ಲಿ ಕುಂದಾಪುರ ತಾಲೂಕಿನ ಸೌಪರ್ಣಿಕಾ ನದಿಯಲ್ಲಿ ಮಾನವ ಶ್ರಮದ ಮೂಲಕ ಹೂಳೆತ್ತುತ್ತಿರುವ ಮರಳುಗಾರಿಕೆಯನ್ನು ಸರಕಾರದ ನಿಯಮಗಳ ಪಾಲನೆಯಡಿಯಲ್ಲಿ ಕೆಲಸ ನಿರ್ವಹಿಸಯವಂತೆ ಕೆಎಸ್‍ಎಂಸಿಎಲ್ ಸಿಬ್ಬಂದಿಗಳು,ಜಾಗದ ಮಾಲೀಕರು,ವಾಹನದ ಮಾಲೀಕರು ಹಾಗೂ ಕಾರ್ಮಿಕರು,ಟೆಂಡರುದಾರರಿಗೆ ಗಂಗೊಳ್ಳಿ ಠಾಣೆಯ ಪಿಎಸ್‍ಐ ವಿನಯ ಕೊರ್ಲಹಳ್ಳಿ ಅವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಸಾರ್ವಜನಿಕರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಗುರುವಾರ ಸಭೆಯನ್ನು ನಡೆಸಿ ಅವರು ಮಾತನಾಡಿದರು.ಕೆಎಸ್‍ಎಂಸಿಎಲ್ ನಿಯಾಮವಳಿಗಳು,ಕಾರ್ಮಿಕರ ಸೌಲಭ್ಯಗಳು,ಟ್ರಾಫಿಕ್ ನಿಯಮಗಳು,ಸ್ವಚ್ಛತೆ,ಅಕ್ರಮ ಮರಳುಗಾರಿಕೆ,ನದಿ ದಂಡೆ ಸಂರಕ್ಷಣೆ,ಮರಳು ಸ್ಟಾಕ್‍ಯಾರ್ಡ್ ಮತ್ತು ಧಕ್ಕೆಯಲ್ಲಿ ಸಿಸಿಟಿವಿ ಕ್ಯಾಮಾರ ಅಳವಡಿಕೆ,ನೊಂದಣಿ ಪುಸ್ತಕ ಸೇರಿದಂತೆ ಕಾವಲುಗಾರರನ್ನು ನೇಮಿಸಿ ಕೂನೂನಿನ ಚೌಕಟ್ಟಿನಲ್ಲಿ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಟೆಂಡರುದಾರದಾ ಆತ್ಮನಂದ ಶೆಟ್ಟಿ,ಕಿರಣ್ ಬಂಗೇರ,ಚೇತನ ಮೊಗವೀರ,ಸದಾಶಿವ ಮೊವಾಡಿ,ರಾಘು ಆಚಾರ್ಯ,ಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಸೌಪರ್ಣಿಕಾ ನದಿಯಲ್ಲಿ ಯಾಂತ್ರೀಕೃತ ಮರಳುಗಾರಿಕೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಎಸ್‍ಎಂಸಿಎಲ್ ನಿಗಾವಣೆಯಲ್ಲಿ ಮಾನವ ಶ್ರಮದ ಮೂಲಕ ಹೂಳೆತ್ತಲು ಅವಕಾಶವನ್ನು ನೀಡಿದೆ.
ಕೆಎಸ್‍ಎಂಸಿಎಲ್ ನಿಗಾವಣೆಯಲ್ಲಿ ಸೌಪರ್ಣಿಕಾ ನದಿಯಲ್ಲಿ ಹೂಳೆತ್ತುವ ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದೇವೆ,ಮರಳು ಮಿತ್ರ ಆ್ಯಪ್ ಮೂಲಕ ಸ್ಥಳೀಯರಿಗೆ ನ್ಯಾಯಯುತವಾದ ಬೆಲೆಯಲ್ಲಿ ಮರಳನ್ನು ನೀಡಲಾಗುವುದು.ಜಿಲ್ಲಾಡಳಿತದ ಸೂಚನೆಯಂತೆ ಕೆಲಸವನ್ನು ನಿರ್ವಹಿಸುತ್ತೇವೆ ಎಂದು ಗುತ್ತಿಗೆದಾರ ಆತ್ಮನಂದ ಶೆಟ್ಟಿ ತಿಳಿಸಿದ್ದಾರೆ.