ಉಡುಪಿ: ಸಿದ್ದರಾಮಯ್ಯ ಐದು ವರ್ಷದ ಆಡಳಿತಾವಧಿಯಲ್ಲಿ ರಾಜ್ಯದ ಎಲ್ಲಾ ಎಸ್ಕಾಂಗಳನ್ನು ದಿವಾಳಿ ಮಾಡಿದ್ದರು. ಈಗ ಕಾಂಗ್ರೆಸ್ ನವರು ಮತ್ತೆ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಇದರ ಹಿಂದೆ ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಆರೋಪಿಸಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸಿಎಂ ಆದ ನಂತರ ಎಲ್ಲಾ ಎಸ್ಕಾಂ ಗಳಿಗೆ ಒಂಭತ್ತು ಸಾವಿರ ಕೋಟಿ ನೀಡಿದ್ದೇವೆ. ಈಗಾಗಲೇ ಸರಕಾರ 16,000 ಕೋಟಿ ರೂಪಾಯಿ ಸಬ್ಸಿಡಿ ರೂಪದಲ್ಲಿ ಕೊಡುತ್ತಿದೆ. ನಮ್ಮ ಸರಕಾರ ಆರ್ಥಿಕ ನಷ್ಟವನ್ನು ಸರಿದೂಗಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ಇಂಧನ ಇಲಾಖೆಯನ್ನು ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ಕಾಲಾವಧಿಯಲ್ಲಿ ಸಬ್ಸಿಡಿ ಹಣವನ್ನು ಕೂಡ ಕೊಡದೆ ಎಸ್ಕಾಂಗಳನ್ನು ಸಾಲದ ನಷ್ಟಕ್ಕೆ ತಳ್ಳಿತ್ತು ಎಂದು ದೂರಿದರು.