ಮಣಿಪಾಲ: ಗಾಯಾಗೊಂಡ ಜಿಂಕೆಯೊಂದನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಪರ್ಕಳ ಹೆರ್ಗಾ ಗ್ರಾಮದ ಗಣಪತಿ ಮಠದ ಬಳಿ ಇಂದು ನಡೆದಿದೆ.
ನಾಯಿಗಳ ಗುಂಪು ಜಿಂಕೆಯನ್ನು ಅಟ್ಟಾಡಿಸಿಕೊಂಡು ಬಂದಿದ್ದು, ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೆರ್ಗಾ ಗ್ರಾಮದ ವಿಠಲಶೆಟ್ಟಿ ಎಂಬವರ ಮನೆಯ ದನದ ಕೊಟ್ಟಿಗೆಗೆ ಜಿಂಕೆ ನುಗ್ಗಿದೆ. ಜಿಂಕೆಯನ್ನು ಕಂಡ ಸ್ಥಳೀಯರು, ಅದನ್ನು ರಕ್ಷಣೆ ಮಾಡಿದ್ದಾರೆ. ಜಿಂಕೆಯ ಕಾಲಿಗೆ ಪೆಟ್ಟಾಗಿ, ಕಾಲು ಊದಿಕೊಂಡಿದೆ. ಹೆಚ್ಚು ದೂರ ಓಡಾಡಲು ಆಗದೆ, ಅಸಹಾಯಕ ಸ್ಥಿತಿಯಲ್ಲಿತ್ತು. ರಕ್ಷಣಾ ಕಾರ್ಯಾಚರಣೆಗೆ ದಿವಾಕರ್ ಶೆಟ್ಟಿ, ಶುಭಕರ ಶೆಟ್ಟಿ, ವಿಘ್ನೇಶ್ ಕೆದ್ಲಾಯ, ವಿಕ್ರಂ ಕೆದ್ಲಾಯ, ಅಶೋಕ್ ಶೆಟ್ಟಿ, ಗುಣಪಾಲ್ ಶೆಟ್ಟಿ ಮೊದಲಾದವರು ಸಹಕರಿಸಿದರು.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳಾದ ಸುರೇಶ್ ಗಾಣಿಗ, ದೇವರಾಜ್ ಪಾಣಾರ ಅವರು ಆಗಮಿಸಿದರು. ಬಳಿಕ ಚಿಕಿತ್ಸೆಗಾಗಿ ಜಿಂಕೆಯನ್ನು ವಾಹನದ ಮೂಲಕ ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ಅವರ ಬಳಿ ಕರೆದುಕೊಂಡು ಹೋಗಲಾಯಿತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಮಣಿಪಾಲ ಟ್ಯಾಪ್ಮಿನ ಟಿ ಪಾರ್ಕ್ ಗೆ ಕರೆತಂದು ಬಿಡಲಾಗಿದೆ. ಸ್ಥಳೀಯ ಯುವಕರ ರಕ್ಷಣಾ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.