ಉಡುಪಿ: ಖ್ಯಾತ ಸುಗಮ ಸಂಗೀತ ಗಾಯಕ, ನಿವೃತ್ತ ಕನ್ನಡ ಭಾಷಾ ಅಧ್ಯಾಪಕ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರು ಬ್ರಹ್ಮಾವರದಲ್ಲಿ ಜ. 24ರಂದು ನಿಧನ ಹೊಂದಿದರು.
ಚಂದ್ರಶೇಖರ ಕೆದ್ಲಾಯ ಅವರಿಗೆ 73 ವರ್ಷ ವಯಸ್ಸಾಗಿತ್ತು. ಚಂದ್ರಶೇಖರ ಕೆದ್ಲಾಯ ಅವರು ಪ್ರಸಿದ್ಧ ಸುಗಮ ಸಂಗೀತ ಗಾಯಕರಾಗಿದ್ದು, ಪರಿಣಿತ ಗಮಕ ಕಲಾವಿದರಾಗಿದ್ದರು. ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಚಂದ್ರಶೇಖರ ಕೆದ್ಲಾಯ 1950ರ ಏಪ್ರಿಲ್ 23ರಂದು ಜನಿಸಿದರು. ಅವರ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿ. ತಂದೆ ಗಣಪಯ್ಯ ಕೆದ್ಲಾಯ. ತಾಯಿ ಕಮಲಮ್ಮ. ಚಂದ್ರಶೇಖರ ಕೆದ್ಲಾಯ ಅವರ ಪ್ರಾರಂಭಿಕ ಶಾಲಾಭ್ಯಾಸ ಒಂದರಿಂದ 5ರವರೆಗೆ ಹಾರ್ಯಾಡಿಯಲ್ಲಿ, ಮುಂದೆ ಎರಡು ವರ್ಷ ಸಾಯಿಬ್ರಕಟ್ಟೆಯಲ್ಲಿ ನಡೆಯಿತು. ಮುಂದೆ ಕೋಟೇಶ್ವರದ ಹೈಸ್ಕೂಲಿನಲ್ಲಿ ಓದಿ, ಕುಂದಾಪುರ ಬೋರ್ಡ್ ಶಾಲೆಯಲ್ಲಿ ಪಿಯುಸಿ ಓದಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎಸ್‍ಸಿಗೆ ಸೇರಿದರು. ಬಳಿಕ ಬಿ.ಎ. ಪದವಿಯನ್ನು ಪೂರ್ಣಗೊಳಿಸಿದರು. ಹಂಗಾರಕಟ್ಟೆಯಲ್ಲಿ ಚೇತನಾ ಪ್ರೌಢಶಾಲೆಯಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು. ಉಡುಪಿ ಟಿ.ಎಂ.ಎ.ಪೈ. ಶಿಕ್ಷಣ ಮಹಾವಿದ್ಯಾಲಯ ಸೇರಿ ಬಿ.ಎಡ್ ಮುಗಿಸಿದರು.
ಚಂದ್ರಶೇಖರ ಕೆದ್ಲಾಯ ಅವರು ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ ಒಂದೂವರೆ ವರ್ಷ (1975-1976) ಕೆಲಸ ಮಾಡಿ, ಮುಂದೆ 35 ವರ್ಷಗಳ (1976-2011) ಕಾಲ ಬ್ರಹ್ಮಾವರದ ನಿರ್ಮಲಾ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008) ಅನ್ನು ಗಳಿಸಿ ಕೀರ್ತಿಗೆ ಪಾತ್ರರಾದರು.
ಸುಗಮ ಸಂಗೀತದಲ್ಲಿ ಚಂದ್ರಶೇಖರ ಕೆದ್ಲಾಯರು ಆಕಾಶವಾಣಿಯಲ್ಲಿ ’ಬಿ’ ಗ್ರೇಡ್ ಗಾಯಕರು. ದೂರದರ್ಶನದಲ್ಲಿ ಅವರ ಭಾವಗೀತೆಗಳ, ರಂಗಗೀತೆಗಳ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.
ಚಂದ್ರಶೇಖರ ಕೆದ್ಲಾಯರ ಗೆಜ್ಜೆ ಮಾತಾಡುತ್ತಾವೊ, ಗುರು ಆರಾಧನಾ, ವೀರಭದ್ರ ಸ್ತುತಿ, ಗೀತ ಸಂಗಮ, ಜಿನಸ್ತುತಿ, ಬಪ್ಪನಾಡು ಸುಪ್ರಭಾತ ಮತ್ತು ಭಕ್ತಿಗೀತೆ, ಅಮೃತವಾಹಿನಿ, ಹಾರುಹಕ್ಕಿ, ಓ ಮನಸ್ಸೆ, ಪಠ್ಯಪುಸ್ತಕದ ಹಾಡುಗಳು ಮೊದಲಾದ ಅನೇಕ ಹಾಡುಗಳ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ.
ಚಂದ್ರಶೇಖರ ಕೆದ್ಲಾಯರು ದಕ್ಷಯಜ್ಞ, ಸಮುದ್ರಮಥನ, ಗಿರಿಜಾ ಕಲ್ಯಾಣ, ಲವಕುಶ, ನಾಗ ಮಹಿಮೆ, ಹೂಗಳ ರಾಣಿ, ಏಕತೆ, ಬಿತ್ತಿದ ಬೀಜ, ದಶಕನ್ಯೆಯರು, ರಾಮಜನನ, ಭರತನ ಭ್ರಾತೃ ಪ್ರೇಮ, ಶಾಂತಲೆ ಹೀಗೆ ಹಲವು ನಾಟಕ ಕೃತಿಗಳನ್ನು ರಚಿಸಿರುವುದರ ಜತೆಗೆ ಹಲವಾರು ನಾಟಕಗಳಿಗೆ ನೃತ್ಯ ರೂಪಕಗಳಿಗೆ ಹಾಡುಗಳ ರಚನೆಯನ್ನೂ ಮಾಡಿದ್ದಾರೆ.
ಚಂದ್ರಶೇಖರ ಕೆದ್ಲಾಯ ಅವರನ್ನರಸಿ ಅನೇಕ ಪ್ರಶಸ್ತಿ, ಪುರಸ್ಕಾರ ಬಂದಿವೆ. ಅವುಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008), ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕ ಪ್ರತಿಭಾ ಸ್ಪರ್ಧೆಯಲ್ಲಿ ಎರಡು ಬಾರಿ ಸಂಗೀತದಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ (1995-1996), ಕರ್ನಾಟಕ ನಾಟಕ ಅಕಾಡೆಮಿಯ ರಂಗ ಭಾರತಿ ನಾಟಕೋತ್ಸವಗಳಲ್ಲಿ ಹೂವಿನ ಹಡಗಲಿಯ ಸಮ್ಮಾನ (2006), ಮೂಡಬಿದಿರೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಶ್ರೀ” ಬಿರುದು ಪ್ರದಾನ (2013), ಕರ್ನಾಟಕ ಗಮಕ ಕಲಾ ಪರಿಷತ್ತಿನಿಂದ ಸನ್ಮಾನ, ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಹಲವು ಬಾರಿ ಸಂಗೀತ ನಿರ್ದೇಶನಕ್ಕೆ ಬಹುಮಾನ, ಉಡುಪಿ ಮೂಡುಬೆಳ್ಳೆ ಉಪಾಧ್ಯ ಪ್ರತಿಷ್ಠಾನದ “ಉಪಾಧ್ಯ ಸನ್ಮಾನ”, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಿಂದ ಸನ್ಮಾನ, ಶೀರೂರು ಮಠದ ಪರ್ಯಾಯದಲ್ಲಿ “ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ (2010), ಗದುಗಿನ ವೀರನಾರಾಯಣ ದೇವರ ಸನ್ನಿಧಿಯಲ್ಲಿ ಸನ್ಮಾನ, ಗಮಕ ಕ್ಷೇತ್ರದಲ್ಲಿನ ಸಾಧನೆಗಾಗಿ ಮುಳಿಯ ಪ್ರಶಸ್ತಿ (2011), ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಶಿಕ್ಷಕ ಸನ್ಮಾನ (2014), ಕಾಂತಾವರ ಕನ್ನಡ ಸಂಘದಿಂದ ಸನ್ಮಾನ (2015), ಕಾಂತಾವರ ಲಲಿತ ಕಲಾ ಪುರಸ್ಕಾರ, ಗೋಪಾಲಕೃಷ್ಣ ಅಡಿಗ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ, ಉಡುಪಿ ಜಿಲ್ಲಾ ಗಮಕ ಸಮ್ಮೇಳನದ ಆಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.