ಉಡುಪಿ: ಡಾ. ಜಿ. ಪರಮೇಶ್ವರ್ ಅವರಿಗೆ ಯಾವುದೇ ಮುನಿಸಿಲ್ಲ. ಅದು ಕೇವಲ ಮಾಧ್ಯಮದ ಸೃಷ್ಟಿ ಅಷ್ಟೇ. ಪಕ್ಷದಲ್ಲಿ ಯಾರ ಮೇಲೂ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಪರಮೇಶ್ವರ್ ಅವರು ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ. ಹಾಗಾಗಿ ಸಮಾಧಾನದ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜೊತೆಯಾಗಿ ಊಟ ಕಾಫಿಗೆ ಹೋಗುತ್ತಿರುತ್ತೇವೆ, ಸಿಟ್ಟು ಮಾಡಿಕೊಂಡಿದ್ದರೆ ನಾವು ಹೋಗುತ್ತಿದ್ದೇವಾ ಎಂದು ಪ್ರಶ್ನಿಸಿದರು.
ಪರಮೇಶ್ವರ್ ಚುನಾವಣಾ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷರು. ಚುನಾವಣಾ ಪ್ರಣಾಳಿಕೆಯ ವಿಚಾರವಾಗಿ ಅವರೊಂದಿಗೆ ಕೆಲವೊಂದು ಚರ್ಚೆ ಮಾಡಬೇಕಾಗಿತ್ತು. ಅದಕ್ಕೆ ಡಿಕೆಶಿ ಅವರು ಹೋಗಿದ್ದರು. ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ಕೊಡುತ್ತಾರೆಂಬುವುದೆಲ್ಲ ಮಾಧ್ಯಮದ ಸೃಷ್ಟಿ ಎಂದರು.
ಕುದುರೆ ವ್ಯಾಪಾರದ ಕುರಿತು ಮಾತನಾಡಿದ ಅವರು, ಅದು ಅತಂತ್ರ ಸರಕಾರ ಇದ್ದಾಗ ಮಾತ್ರ ಕುದುರೆ ವ್ಯಾಪರಕ್ಕೆ ಅವಕಾಶ. ಯಾವುದೇ ಕಾರಣಕ್ಕೂ ಅತಂತ್ರ ಸರಕಾರ ಬರುವುದಿಲ್ಲ. ಜನರಿಗೆ ನೋವಾಗಿದೆ, ಸ್ಪಷ್ಟವಾದ ಬಹುಮತ ಬರಲಿದೆ ಎಂದು ಹೇಳಿದರು.
ಫೆಬ್ರವರಿ ಅಂತ್ಯದೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಫೆಬ್ರವರಿ ತಿಂಗಳ ಅಂತ್ಯದೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 37 ಜನರ ಸಮ್ಮುಖ ಬಂದಿದೆ. ನಿನ್ನೆ ಸಂಜೆ ನಾಲ್ಕು ಗಂಟೆಯವರೆಗೂ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಎಲ್ಲರು ಅನಿಸಿಕೆ, ಶಿಫಾರಸುಗಳನ್ನು ಕೊಟ್ಟಿದ್ದಾರೆ, ಮುಂದಿನ ಹಂತದಲ್ಲಿ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಲಿದೆ. ಸ್ಕ್ರೀನಿಂಗ್ ಕಮಿಟಿ ಆಯ್ಕೆಯಾಗಬೇಕು. ಅದರಲ್ಲಿ ಮೂರು ಜನ ಎಐಸಿಸಿ ಅವರು ಇರುತ್ತಾರೆ.
ಸ್ಕ್ರೀನಿಂಗ್ ಕಮಿಟಿ ಫೈನಲ್ ಮಾಡಿ ಆಮೇಲೆ ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಹೋಗುತ್ತದೆ. ಪ್ರಾಥಮಿಕ ಹಂತದ ಪ್ರಕ್ರಿಯೆ ಮುಗಿದಿದ್ದು, ನಿನ್ನೆ ಪ್ರದೇಶ್ ಎಲೆಕ್ಷನ್ ಕಮಿಟಿ ಜವಾಬ್ದಾರಿ ಮುಕ್ತಾಯವಾಗಿದೆ. ಫೆಬ್ರವರಿ ತಿಂಗಳ ಕೊನೆಯೊಳಗೆ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ ಎಂದರು.