ಉಡುಪಿ: ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಕರಾವಳಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂಥವರನ್ನು ಕೈಬಿಟ್ಟು ಯಕ್ಷಗಾನದ ಗಂಧಗಾಳಿಯೂ ಗೊತ್ತಿಲ್ಲದ ರೋಹಿತ್ ಚಕ್ರತೀರ್ಥನನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಹ್ವಾನಿಸಿರುವುದು ಯಕ್ಷಗಾನಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನದ ಅನುಭವ ಇರುವ ಧೀಮಂತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸೂಕ್ತ. ಈ ಬಗ್ಗೆ ಸಂಘಟಕರು ಆಲೋಚಿಸಬೇಕು ಎಂದರು.
ಕಟಪಾಡಿ ಯುವವಾಹಿನಿ ಅಧ್ಯಕ್ಷ ಸುನಿಲ್ ಬಂಗೇರಾ ಮಾತನಾಡಿ, ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟು ಹಿಂದುಳಿದ ವರ್ಗದವರ ಭಾವನೆಗೆ ಧಕ್ಕೆ ಮಾಡಿದ, ಯಕ್ಷಗಾನದ ಯಾವುದೇ ಅನುಭವ ಇಲ್ಲದ ರೋಹಿತ್ ಚಕ್ರತೀರ್ಥರಿಂದ ದಿಕ್ಸೂಚಿ ಭಾಷಣ ಮಾಡಿಸುತ್ತಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇದ್ದರು.