ಮಂಗಳೂರು: ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ ಮೊದಲೇ ಕಾರ್ಕಳ ಕ್ಷೇತ್ರ ಚುನಾವಣಾ ರಣಕಣವಾಗಿ ಮಾರ್ಪಟ್ಟಿದೆ. ರಾಜ್ಯದೆಲ್ಲೆಡೆ ಕಾರ್ಕಳ ಕ್ಷೇತ್ರದ ವಿಚಾರ ರಾಜಕೀಯ ಕ್ಷೇತ್ರದ ಬಹುಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲ ಕಾರಣ ಕಾರ್ಕಳದಲ್ಲಿ ಹಾಲಿ ಶಾಸಕ, ಸಚಿವ ಸುನೀಲ್ ಕುಮಾರ್ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವುದಾಗಿ ಘೋಷಿಸಿರುವುದು. ಸುನೀಲ್ ಸೇರಿದಂತೆ ಬಿಜೆಪಿ ಮುಖಂಡರದ್ದು ಡೋಂಗಿ ಹಿಂದುತ್ವ ಎಂದು ಮುತಾಲಿಕ್ ಜರೆದಿದ್ದಾರೆ. ಈ ಕಾರಣದಿಂದ ನಾನು ನೈಜ ಹಿಂದುತ್ವದ ಪ್ರತಿಪಾದಕನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಸ್ಪರ್ಧೆಗೆ ಬಿಜೆಪಿ ಸಚಿವರೇ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿರುವುದು ಬಿಜೆಪಿ ಮುಖಂಡರು ಮತ್ತು ವರಿಷ್ಠರಲ್ಲಿ ತಳಮಳ ಸೃಷ್ಟಿಸಿದೆ. ಈ ಮಧ್ಯೆ ಅವರೇ ಸ್ಥಾಪಿಸಿದ ಸಂಘಟನೆ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮುತಾಲಿಕ್ ಅವರು ಕೆಲ ಕಾಂಗ್ರೆಸ್ಸಿಗರ ಆಮಿಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ವಿವರ ಪಡೆಯಲು ಖುದ್ದು ಪ್ರಮೋದ್ ಅವರನ್ನು ನ್ಯೂಸ್ ಕನ್ನಡ ಪ್ರತಿನಿಧಿ ಮಾತನಾಡಿಸಿದ್ದು ಮಾತುಕತೆ ವಿವರ ಇಲ್ಲಿದೆ.
ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ:
ರಾಜ್ಯದ 12 ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧೆಗೆ ನಾನು ಸಮೀಕ್ಷೆ ನಡೆಸಿದ್ದೇನೆ. ಸಮೀಕ್ಷೆಯಲ್ಲಿ ಕಾರ್ಕಳ ಮತ್ತು ಜಮಂಖಡಿಯ ತೇರಳ ಕ್ಷೇತ್ರ ಸ್ಪರ್ಧೆ ಸೂಕ್ತ ಎಂಬುದು ಕಂಡುಬಂತು. ಅಲ್ಲದೇ ಕಾರ್ಕಳ ಕ್ಷೇತ್ರದ ನಮ್ಮ ಸಂಘಟನೆ ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಡ ಹಾಕಿದರು. ಕ್ಷೇತ್ರದಲ್ಲಿ ಭ್ರಷ್ಟಾಚಾರ ವಿಪರೀತ ಹೆಚ್ಚಿದೆ. ಸಚಿವರ ದರ್ಪದ ವರ್ತನೆ ಅತಿಯಾಗಿದೆ. ಸಾಮಾನ್ಯ ಹಿಂದು ಕಾರ್ಯಕರ್ತರು ನೋವು ಹೇಳಿಕೊಳ್ಳದ ಸ್ಥಿತಿಯಿದೆ. ಹಿಂದು ಸಂಘಟನೆಗಳಿಗೆ ಬೆಲೆಯಿಲ್ಲ ಎಂದು ಅಳಲು ತೋಡಿಕೊಂಡರು. ಅಲ್ಲದೇ ಕಾಂಗ್ರೆಸ್‌ನಲ್ಲಿ ಸುನೀಲ್ ಕುಮಾರ್ ಅವರನ್ನು ಎದುರಿಸುವ ಸಮರ್ಥ ಅಭ್ಯರ್ಥಿ ಇಲ್ಲ. ಹೀಗಾಗಿ ನೀವೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಕಾರಣದಿಂದ ಸ್ಪರ್ಧೆ ಮಾಡುತ್ತಿದ್ದೇನೆ.
ನೀವು ಹಿಂದುತ್ವ ತಳಹದಿ ಹೊಂದಿದ ಬಿಜೆಪಿಗೆ ಪರ್ಯಾಯವೇ?
ಹೌದು ಇದು ಕಾರ್ಯಕರ್ತರ ಮನದಾಳ ಆದ ಕಾರಣ ಸ್ಪರ್ಧೆಗೆ ನಿರ್ಧರಿಸಿದ್ದೇನೆ.
ಕಾರ್ಕಳದಲ್ಲಿ ಹಿಂದುತ್ವಕ್ಕೆ ಹೇಗೆ ಧಕ್ಕೆಯಾಗಿದೆ?
ಸುನೀಲ್ ಕಾರ್ಕಳ ಕ್ಷೇತ್ರದಲ್ಲಿ 3 ಬಾರಿ ಜಯಗಳಿಸಿದ್ದಾರೆ. 2 ಬಾರಿ ಸೋತಿದ್ದಾರೆ. ಅವರು ಗೆಲುವು ಗಳಿಸಿದ್ದೇ ಹಿಂದುತ್ವದ ಹೆಸರಿನಲ್ಲಿ. ಆದರೆ ಹಿಂದು ಕಾರ್ಯಕರ್ತರನ್ನುಮರೆತಿದ್ದಾರೆ. ವಿವಿಧ ಹೋರಾಟದ ವೇಳೆ ಹಿಂದು ಕಾರ್ಯಕರ್ತರ ಮೇಲೆ ದಾಖಲಾಗಿರುವ ರೌಡಿ ಶೀಟರ್, ಗೂಂಡಾ ಪ್ರಕರಣ ತೆಗೆಯಲು ಸಹಕಾರ ನೀಡಿಲ್ಲ. ಕಾರ್ಯಕರ್ತರು ಇಂದಿಗೂ ಪೊಲೀಸ್ ಸ್ಟೇಶನ್, ನ್ಯಾಯಾಲಯ ಎಂದು ಅಲೆದಾಡುತ್ತಿದ್ದಾರೆ. ಹಿಂದು ಕಾರ್ಯಕರ್ತರು ಗೋಮಾತೆ ರಕ್ಷಣೆಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಕಾರ್ಕಳದಲ್ಲಿ ಬಹಿರಂಗವಾಗಿ ಗೋಕಳ್ಳತನ ನಡೆಯುತ್ತಿದೆ. ಮನೆಯಿಲ್ಲಿರುವ ಗೋವುಗಳನ್ನು ಕತ್ತಿಹಿಡಿದು ಬೆದರಿಸಿ, ಹಲ್ಲೆ ನಡೆಸಿ ಕಳವು ಮಾಡುತ್ತಿದ್ದಾರೆ. ಶಾಸಕರು ಗೋಕಳ್ಳರನ್ನುನಿಯಂತ್ರಿಸುವ ಬದಲು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದನಗಳ್ಳತನ ಪ್ರಕರಣ ಕುರಿತು ತನಿಖೆಯೇ ನಡೆಯುತ್ತಿಲ್ಲ.
ಸ್ಪರ್ಧೆ ಘೋಷಣೆಗೆ ನಿಮ್ಮ ಸಂಘಟನೆಯಲ್ಲಿಯೇ ವಿರೋಧ ಇದೆಯಲ್ಲವೇ ?
ಈ ಬಗ್ಗೆ ಶ್ರೀರಾಮಸೇನೆ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಅಧ್ಯಕ್ಷರು ಸ್ಪಷ್ಟೀಕರಣ ನೀಡಿದ್ದಾರೆ. ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.
ಕೇವಲ ಹಿಂದುತ್ವವೇಕೆ ಅಭಿವೃದ್ಧಿ ಬೇಡವೇ ?
ಕಾರ್ಕಳ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಅಭಿವೃದ್ಧಿಯಾಗಿದೆ. ಥೀಂ ಪಾರ್ಕ್ ಸೇರಿದಂತೆ ಕೆಲ ಕಾರ್ಯಗಳು ನಡೆದಿದೆ. ಆದರೆ ಅದಕ್ಕಿಂತ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಮುಖ್ಯರಸ್ತೆಅಭಿವೃದ್ಧಿಯಾಗಿದೆ. ಆದರೆ ಒಳರಸ್ತೆಗಳು ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಎಂಬುದು ಕೇವಲ ಉತ್ಸವ ಆಗಿದೆ. ಜನಸಾಮಾನ್ಯರ ಕಷ್ಟಸುಖಕ್ಕೆ ಸ್ಪಂದಿಸುವ ಕಾರ್ಯ ನಡೆದಿಲ್ಲ. ಕೇಂದ್ರ ಸರ್ಕಾರದ ಅನುದಾನದಿಂದ ಮುಖ್ಯರಸ್ತೆನಿರ್ಮಾಣವಾಗಿದೆ. ಸಂಸದರ ಕೊಡುಗೆ ಇದು. ಹಳ್ಳಿಗಳಲ್ಲಿ ಆಸ್ಪತ್ರೆಯಿಲ್ಲ. ಸಚಿವರಾಗಿದ್ದರೂ ಮೆಡಿಕಲ್ ಕಾಲೇಜನ್ನು ತರಲು ಸಾಧ್ಯವಾಗಿಲ್ಲ. ಕಾರ್ಕಳ ಆಸುಪಾಸು ತುಸು ಕಣ್ಣಿಗೆ ತೋರುವಂತೆ ಕೆಲವೆಡೆ ಅಭಿವೃದ್ಧಿಯಾಗಿದೆ. ಹೆಬ್ರಿಯೂ ಕೂಡ ಶಾಸಕರ ಕ್ಷೇತ್ರಕ್ಕೆ ಒಳಪಡುತ್ತಿದೆ. ಆದರೆ ಆ ಭಾಗದಲ್ಲಿ ಯಾವುದೇ ಅಭಿವೃದ್ದಿಯಿಲ್ಲ. ಅಪಘಾತ, ಆಕಸ್ಮಿಕ ಸಂದರ್ಭದಲ್ಲಿ 40 ಕಿಲೋಮೀಟರ್ ದೂರದ ಮಣಿಪಾಲ, ಕಾರ್ಕಳದ ಆಸ್ಪತ್ರೆಗೆ ತಲುಪಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಹೆಬ್ರಿ ಶಾಪ ಕೂಪಕ್ಕೆ ತುತ್ತಾಗಿದ್ದು, ಮೂರುಬಾರಿ ಗೆದ್ದಂತಹ ಸಚಿವರ ಕಾರ್ಯವೈಖರಿ ಪ್ರದರ್ಶನಕ್ಕೆ ಸೀಮಿತವಾಗಿದೆ.
ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ , ಇತರೆ ಪಕ್ಷಗಳು ಬಲಿಷ್ಠವಾಗಿರುವಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕಿತ್ತಲ್ಲವೇ?
ಬಿಜೆಪಿಗರ ಬೂಟಾಟಿಕೆ ಬಯಲು ಮಾಡುವ ಏಕೈಕ ಉದ್ದೇಶದಿಂದ ಕಾರ್ಕಳದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲದೇ ಹೋದಲ್ಲಿ ಆನೆ ನಡೆದ್ದೇ ದಾರಿ ಎಂಬಂತಾಗುತ್ತದೆ. ಹಿಂದುತ್ವದ ಅಜೆಂಡಾ ಜನರ ಮುಂದಿಟ್ಟು ಮೂರು ಬಾರಿ ಗೆದ್ದು, ಜನರಿಗೆ ದ್ರೋಹಬಗೆದ ವ್ಯಕ್ತಿಗೆ ನೈಜ ಹಿಂದು ಯಾರು ಎಂಬುದನ್ನು ತೋರಿಸುವುದಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ.
ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದ ಬಿಜೆಪಿ ಇಂದು ಹಿಂದುತ್ವವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಕುರಿತು ಹಿಂದು ಕಾರ್ಯಕರ್ತರಲ್ಲಿ ಯಾವ ಪರಿ ಆಕ್ರೋಶವಿದೆ ಎಂಬುದಕ್ಕೆ ಪ್ರವೀಣ್ ನೆಟ್ಟಾರ್ ಹತ್ಯೆ ಸಂದರ್ಭ ಸಂಭವಿಸಿದ ಘಟನೆಗಳೇ ಸಾಕ್ಷಿ. ಬಿಜೆಪಿಯವರದ್ದು ನೂರಕ್ಕೇ ನೂರು ಡೋಂಗಿ ಹಿಂದುತ್ವ ಈ ವಿಚಾರದಲ್ಲಿ ಯಾವುದೇ ಅನುಮಾನವೇ ಇಲ್ಲ. ಬಿಜೆಪಿಗರ ಆಚರಣೆಯಲ್ಲಿ ಹಿಂದುತ್ವದ ಲವಲೇಷವೂ ಇಲ್ಲ. ಇದಕ್ಕೆ ಈಗಲೂ ರಾಜಾರೋಷವಾಗಿ ನಡೆಯುತ್ತಿರುವ ಗೋಕಳ್ಳತನಗಳೇ ಸಾಕ್ಷಿ. ಈ ಬಗ್ಗೆ ಬಿಜೆಪಿಗರು ಅಂಕಿ ಅಂಶ ನೀಡಲಿ. ನಿರಂತರವಾಗಿ ಮತಾಂತರ ಚಟುವಟಿಕೆ ನಡೆಯುತ್ತಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿ ಬೂಟಾಟಿಕೆ ಮಾಡುತ್ತಿದೆ.
ಬಿಜೆಪಿ, ಸಚಿವರೇ ಚುನಾವಣೆಗೆ ಸ್ಪರ್ಧಿಸಲು ಬೆಂಬಲ ನೀಡುತ್ತಿದ್ದಾರೆ ಎಂದಿದ್ದೀರಿ ಇದರ ಮರ್ಮವೇನು?
ಬಿಜೆಪಿ ಸಚಿವರು ಮಾತ್ರವಲ್ಲ. ಕಾಂಗ್ರೆಸ್ಸಿಗರು ಕೂಡ ಬೆಂಬಲ ನೀಡುತ್ತಿದ್ದಾರೆ. ನಾನು ಹೆಸರು ಹೇಳಿದಲ್ಲಿ ಬಿಜೆಪಿ ಸಚಿವರ ವಿರುದ್ಧವೇ ಸ್ವಪಕ್ಷಿಯರೇ (ಬಿಜೆಪಿ) ಸಂಚು ರೂಪಿಸುತ್ತಿದ್ದಾರೆ ಎಂದಾಗುತ್ತದೆ. ಹೀಗಾಗಿ ಬೆಂಬಲ ನೀಡಿರುವ ಸಚಿವರ ಹೆಸರು ಹೇಳುವ ಅವಶ್ಯಕತೆ ಇಲ್ಲ.
ಹಣ ಗಳಿಕೆ ಉದ್ದೇಶದಿಂದ ಸ್ಪರ್ಧೆ ಎಂಬ ಸಚಿವ ಸುನೀಲ್ ಹೇಳಿಕೆಗೇನು ಹೇಳುತ್ತೀರಿ?
ನನಗೆ 40 ವರ್ಷಗಳ ಹೋರಾಟ ಸಂದರ್ಭ ಹಲವು ಬಾರಿ ಸಂಪತ್ತು ಗಳಿಕೆಗೆ ಅವಕಾಶ ಸಿಕ್ಕಿತ್ತು. ಆದರೆ ಪ್ರಾಮಾಣಿಕತೆಯನ್ನು ಬಿಟ್ಟಿಲ್ಲ. ಹಣ ಮಾಡಲು ಬೆಳಗಾವಿಯಿಂದ ಕಾರ್ಕಳಕ್ಕೆ ಬರುವ ಅನಿವಾರ್ಯತೆ ನನಗೇನಿದೆ ? ನನಗೆ ಸಂಸಾರವಿಲ್ಲ. ನನ್ನ ಆಸ್ತಿ ಹಿಂದೂ ಸಮಾಜ. ಅವರಿಗೆ ಮಾನ್ಯತೆ, ಗೌರವ, ದೊರತಲ್ಲಿ ಅದೇ ನನ್ನ ಸಂಪತ್ತು.
ಮುತಾಲಿಕ್ ಗೆದ್ದರೆ ಅಭಿವೃದ್ಧಿ ವಿಷಯಗಳೇನು: ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ಮೊದಲ ಆದ್ಯತೆ. ಈಗ ನನಗೆ 68 ವರ್ಷ ವಯಸ್ಸು. ನನಗೆ ಮದುವೆ ಆಗಿಲ್ಲ. ಹೀಗಾಗಿ ನನಗೆ ಹಣ ಮಾಡುವ ಆಸೆ ಇಲ್ಲ. ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ತತ್ವದಂತೆ ಹೋರಾಟ ನಡೆಸುತ್ತಿದ್ದೇನೆ. ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಇಚ್ಛೆ ನನ್ನದು. ಹಿಂದುತ್ವ, ರಾಷ್ಟ್ರೀಯತೆ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೇ, ಆಡಳಿತ ಎಂದರೇ ಇದು ಎಂದು ಜನರಾಡಿಕೊಳ್ಳುವಂತೆ ಮಾಡುತ್ತೇನೆ.