ಉಡುಪಿ: ಮಾನಸಿಕ ಅಸ್ವಸ್ಥತೆಯಿಂದಾಗಿ ತನ್ನ ಕುಟುಂಬವನ್ನು ತೊರೆದು ಬೀದಿ ಪಾಲಾಗಿದ್ದ ಬಿಹಾರ ಮೂಲದ ಮಹಿಳೆಯೊಬ್ಬರು ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಹಾಗೂ ಮಂಜೇಶ್ವರದ ದೈಗೋಳಿ ಶ್ರೀಸಾಯಿ ಸೇವಾಶ್ರಮದ ಡಾ. ಉದಯ ಕುಮಾರ್ ದಂಪತಿಯ ನೆರವಿನಿಂದ ಗುಣಮುಖರಾಗಿ 3 ವರ್ಷದ ಬಳಿಕ ತನ್ನ ಕುಟುಂಬವನ್ನು ಮರಳಿ ಸೇರಿದ ಅಪರೂಪದ ಘಟನೆ ನಡೆದಿದೆ.
ಬಿಹಾರದ 33ವರ್ಷದ ಸಪ್ನಾ ಮನೆ ಸೇರಿದ ಮಹಿಳೆ. ವರ್ಷದ ಹಿಂದೆ ನಗರದ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಗೋಣಿ ಚೀಲಗಳಲ್ಲಿ ನಿರುಪಯುಕ್ತ ವಸ್ತು ಆಯ್ದು, ಹಸಿ ಮೀನು ತಿನ್ನುತ್ತಾ, ದುರಂತ ಬದುಕು ಸಾಗಿಸುತ್ತಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಮಹಿಳೆಯನ್ನು ವಶಕ್ಕೆ ಪಡೆದು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದರು.
ಸೇವಾಶ್ರಮದ ಡಾ.ಉದಯ ಕುಮಾರ್ ದಂಪತಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಆರೈಕೆಯಿಂದ ಚೇತರಿಸಿಕೊಂಡ ಸಪ್ನಾ ಬಿಹಾರದ ತನ್ನ ಕುಟುಂಬದ ವಿಳಾಸವನ್ನು ನೀಡಿದ್ದಾಳೆ. ಆದರೆ ಈಕೆ ನೀಡಿದ ವಿಳಾಸಕ್ಕೆ ಕರೆದೊಯ್ದು ಬಿಡುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಮುಂಬೈ ಶ್ರದ್ಧಾ ಪುನರ್ವಸತಿ ಕೇಂದ್ರದ ನೆರವು ಪಡೆದು ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಸೇರಿಸಲಾಯಿತು.