ಕುಂದಾಪುರ: ಕಾಡ್ಗಿಚ್ಚಿನಂತಹ ಬೆಂಕಿ ಅವಘಢಗಳು ಸಂಭವಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಬೆಂಕಿ ನಂದಿಸುವ ಕಾರ್ಯದ ಜತೆಗೆ ತಮ್ಮ ಸುರಕ್ಷತೆಗೂ ಆದ್ಯತೆ ಕೊಡಬೇಕು ಈ ಸಮಯದಲ್ಲಿ ಅಜಾಗರೂಕತೆ ಅಥವಾ ನಿರ್ಲಕ್ಷ್ಯ ವಹಿಸಬಾರದು.ಈ ರೀತಿಯ ತರಬೇತಿ, ಪ್ರಾತ್ಯಕ್ಷಿಕೆಗಳು ಇಂತಹ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸಲು ಸಹಕಾರಿಯಾಗಬಲ್ಲದು ಎಂದು ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ.ನಾಯಕ್ ಹೇಳಿದರು.
ಅರಣ್ಯ ಇಲಾಖೆ ಮಂಗಳೂರು ವೃತ್ತ,ಕುಂದಾಪುರ ಅರಣ್ಯ ವಿಭಾಗ ಹಾಗೂ ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಬೆಂಕಿ ಅವಘಢ ನಿರ್ವಹಣೆ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಲಯದ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ ಅರಣ್ಯ ಇಲಾಖೆಯ ಕೆಲಸವೇ ಒಂದು ರೀತಿಯ ಸವಾಲಿನದ್ದಾಗಿದೆ. ಕಾಡಿನಲ್ಲಿ ಬೆಂಕಿ ಅವಘಢದಂತಹ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಅಧಿಕಾರಿಗಳು,ಸಿಬಂದಿಗಳು ತಮ್ಮ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ಕೊಡಬೇಕು.ಅರಣ್ಯ ಉಳಿಸುವುದು ನಮ್ಮ ಆದ್ಯತೆಯಾಗಿದ್ದರೂ, ಜೀವ ರಕ್ಷಣೆಯೂ ಮುಖ್ಯ ಎಂದು ಹೇಳಿದರು.
ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಟಿ,ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಬಾಬು ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಬೆಂಕಿ ಅವಘಢದಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಕಲೇಶಪುರದಲ್ಲಿ ಕಾಡಿನ ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ದುರದೃಷ್ಟವಶಾತ್ ಸಾವನ್ನಪ್ಪಿದ ಅರಣ್ಯ ಇಲಾಖೆಯ ಎಸ್.ಕೆ. ಸುಂದರೇಶ್ ಅವರಿಗೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಲಾಯಿತು.
ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಐಸಿಟಿ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್,ಆರೋಗ್ಯ ಇಲಾಖೆಯ ಅನ್ನಪೂರ್ಣ ಹಾಗೂ ಸಿಬಂದಿ,ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ರಕ್ಷಕರು, ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿ ದಿಲೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರಣ್ಯ ಪಾಲಕ ಕೇಶವ ಪೂಜಾರಿ ಪರಿಚಯಿಸಿದರು.